ಸಂಚಿಕೆ ೨ – ಇರುವೆ

0
274
© ಸುಧೀಂದ್ರ ರಾವ್

ಸಾವಿರಾರು ಇರುವೆಗಳುಸಾಲಾಗಿ ಹೋಗುವುದನ್ನು ಕಂಡರೆ ನಿಜವಾಗಿಯೂ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಇರುವೆಗಳು ದಾರಿ ತಪ್ಪುವುದಿಲ್ಲವೇ ಎಂಬ ಪ್ರಶ್ನೆ ನಮ್ಮೆಲ್ಲರಲ್ಲೂ ಮೂಡಿರುವುದುಸಹಜ. ಅದಕ್ಕೆ ಉತ್ತರ ಇಲ್ಲಿದೆ.

‘ಫೆರೊಮೋನ್’ ಎಂಬ ರಾಸಾಯನಿಕದ ಮೂಲಕ ಇರುವೆಗಳು ಪರಸ್ಪರ ಸಂಪರ್ಕ ಸಾಧಿಸುತ್ತವೆ. ‘ಹೆಮ್ನೋಪೆಟ್ರಾ’ ವರ್ಗದ ಇತರ ಜೀವಿಗಳಿಗಿಂತ ಇರುವೆಗಳಲ್ಲಿ ಈ ಸಂಕೇತ ವ್ಯವಸ್ಥೆಯು ಹೆಚ್ಚು ಪ್ರಬುದ್ಧವಾಗಿದೆ. ಇತರ ಕೀಟಗಳಂತೆಯೇ ಸಾಕಷ್ಟು ಚಲನಶಕ್ತಿಯನ್ನು ಹೊಂದಿರುವ ಇರುವೆಗಳು, ಮೀಸೆಗಳ ಮೂಲಕ  ವಾಸನೆಯನ್ನು ಗ್ರಹಿಸುತ್ತವೆ. ಶಿರದ ಎರಡೂ ಕಡೆಗಳಲ್ಲಿ ಇರುವ ಈ ಮೀಸೆಗಳು ವಾಸನೆಯ ತೀವ್ರತೆ ಮತ್ತು ದಿಕ್ಕುಗಳೆರಡನ್ನೂ ಕರಾರುವಕ್ಕಾಗಿ ಅರಿಯಲು ಇರುವೆಗಳಿಗೆ ಸಹಕಾರಿಯಾಗಿವೆ.

ಸಾಮಾನ್ಯವಾಗಿ ಇರುವೆಗಳು ತಮ್ಮೆಲ್ಲ ಜೀವನಾವಧಿಯನ್ನು ನೆಲದ ಸಂಪರ್ಕದಲ್ಲಿಯೇ ಕಳೆಯುವುದರಿಂದ ಫೆರೊಮೋನ್ ರಾಸಾಯನಿಕವನ್ನು ಉಳಿಸಿಕೊಳ್ಳುವ ಮಾಧ್ಯಮವಾಗಿ ನೆಲವನ್ನು ಬಳಸಿಕೊಳ್ಳುತ್ತವೆ. ಈ ರಾಸಾಯನಿಕದ ಜಾಡನ್ನು ಹಿಡಿದು ಉಳಿದ ಇರುವೆಗಳು ಹಿಂಬಾಲಿಸಲು ಅನುವಾಗುತ್ತದೆ. ಗುಂಪಾಗಿ ಹೊರಟು ಆಹಾರವನ್ನು ಹುಡುಕುವ ಇರುವೆಗಳು, ಆಹಾರವು ಕಂಡಾಗ ಆ ಸ್ಥಾನದಿಂದ ತಮ್ಮ ಗೂಡಿನವರೆಗೆ ಫೆರೊಮೋನ್ ರಾಸಾಯನಿಕದ ಮೂಲಕ ಒಂದು ದಾರಿಯನ್ನು ಗುರುತು ಮಾಡುತ್ತವೆ. ಗೂಡಿನ ಇತರ ಇರುವೆಗಳು ಈ ಜಾಡಿನಲ್ಲಿ ಸಾಗಿ ಆಹಾರವಿರುವ ಸ್ಥಳವನ್ನು ತಲುಪುವುವು. ಈ ಜಾಡಿನಲ್ಲಿ ಯಾವುದಾದರೂ ಹೊಸ ಅಡಚಣೆಗಳುಂಟಾಗಿ ದಾರಿಯು ಮುಚ್ಚಿಹೋದಾಗ ಎಲ್ಲಕ್ಕೂ ಮುಂದಿರುವ ಇರುವೆಗಳು ಹೊಸ ದಾರಿಯನ್ನು ಹುಡುಕತೊಡಗುತ್ತವೆ. ಇದರಲ್ಲಿ ಯಶಸ್ವಿಯಾದ ಇರುವೆಯು ಹಿಂದಕ್ಕೆ ಮರಳುವಾಗ ಮತ್ತೊಮ್ಮೆ ಫೆರೊಮೋನ್ ಅನ್ನು ಉದುರಿಸುತ್ತಾ ಹೊಸ ಜಾಡನ್ನು ಸೃಷ್ಟಿಸುತ್ತದೆ. ಈ ಹೊಸದಾದ ಜಾಡನ್ನು ಮತ್ತಷ್ಟು ಇರುವೆಗಳು ಹಿಂಬಾಲಿಸಿ ಎಲ್ಲವೂ ಈ ದಾರಿಯಲ್ಲಿ ರಾಸಾಯನಿಕವನ್ನು ಉದುರಿಸುತ್ತಾ ಸಾಗುತ್ತವೆ.

ಹೀಗೆ ಅತ್ಯಂತ ಗಾಢವಾದ ರಾಸಾಯನಿಕವುಳ್ಳ ಜಾಡು ಉಳಿದ ಇರುವೆಗಳಿಗೆ ಅಧಿಕೃತ ಹಾದಿಯಾಗುವುದು. ಆಹಾರವನ್ನು ಅರಸುತ್ತ ಗೂಡಿನಿಂದ ಬಲು ದೂರ ಸಾಗುವ ಇರುವೆಗಳು ಕೆಲ ಗುರುತುಗಳ ಆಧಾರದ ಮೇಲೆ ಮತ್ತು ಸೂರ್ಯನ ಸ್ಥಾನದ ಮೇಲೆ ತಮ್ಮ ಮನೆಯನ್ನು ಸೇರಿಕೊಳ್ಳುತ್ತವೆ.

ಫೆರೊಮೋನ್ ರಸಾಯನವು ಇರುವೆಗಳಿಗೆ ಇತರ ರೀತಿಯಲ್ಲಿಯೂ ಸಹ ಬಳಕೆಗೆ ಬರುವುದು. ತುಳಿಯಲ್ಪಟ್ಟ ಅಥವಾ ಜಜ್ಜಲ್ಪಟ್ಟ ಇರುವೆಯು ಅತಿ ದೊಡ್ಡ ಪ್ರಮಾಣದಲ್ಲಿ ಈ ರಾಸಾಯನವನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಸಂಗಾತಿಗಳಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತದೆ. ಇಂತಹ ಸೂಚನೆ ದೊರೆತ ಕೂಡಲೇ ಸುತ್ತಲಿನ ಇರುವೆಗಳು ಆಕ್ರಮಣಕ್ಕೆ ಸನ್ನದ್ಧವಾಗುತ್ತವೆ. ಮಧ್ಯಮ ಪ್ರಮಾಣದಲ್ಲಿ ಬಿಡುಗಡೆಯಾದ ಫೆರೊಮೋನ್ ಇರುವೆಗೆ ಸುತ್ತಲಿನ ಇರುವೆಗಳನ್ನು ತನ್ನತ್ತ ಆಕರ್ಷಿಸಿಕೊಳ್ಳಲು ನೆರವಾಗುವುದು.

ಅನೇಕ ತಳಿಗಳ ಇರುವೆಗಳು ತಮ್ಮ ತಳಿಯ ಫೆರೊಮೋನ್ ಮಾತ್ರವಲ್ಲದೆ ಇತರ ತಳಿಗಳ ಫೆರೊಮೋನ್ ಗಳನ್ನು ಸಹ ಉತ್ಪಾದಿಸುವ ಶಕ್ತಿ ಪಡೆದಿವೆ. ಶತ್ರು ಇರುವೆಗಳು ಎದುರಾದಾಗ ಇವು ಶತ್ರು ಗುಂಪಿನವುಗಳ ಫೆರೊಮೋನ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೊರಹಾಕಿ ಶತ್ರುಗಳಲ್ಲಿ ಗೊಂದಲ ಮೂಡಿಸುತ್ತವೆ. ಇದರಿಂದಾಗಿ ಅನೇಕ ವೇಳೆ ಶತ್ರುಗಳು ತಮ್ಮತಮ್ಮಲ್ಲೇ ಕಾದಾಟ ನಡೆಸುವುದೂ ಉಂಟು.

ಇರುವೆಗೆ ಫೆರೊಮೋನ್ ನ ಅವಶ್ಯಕತೆ ಬಹಳ ಹೆಚ್ಚಾಗಿರುವುದರಿಂದ ಬೇಡಿಕೆಯನ್ನು ಪೂರೈಸಲು ದೇಹದ ಅನೇಕ ಗ್ರಂಥಿಗಳು ಈ ರಾಸಾಯನದ ಉತ್ಪಾದನೆಯನ್ನು ಮಾಡುತ್ತವೆ. ಅಹಾರದ ಜೊತೆಗೆ ಫೆರೊಮೋನ್ ಅನ್ನು ಮಿಶ್ರಮಾಡಿ ಇತರ ಇರುವೆಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದರ ಮೂಲಕ ಇರುವೆಗಳು ಪರಸ್ಪರ ಯೋಗಕ್ಷೇಮ ತಿಳಿದುಕೊಳ್ಳುತ್ತವೆ. ಇದೇ ಫೆರೊಮೋನ್, ಕೆಲಸಗಾರ ಇರುವೆಯ ನಿಗದಿತ ಕಸುಬಿನ ಬಗ್ಗೆ ಕೂಡ ಮಾಹಿತಿ ನೀಡುತ್ತದೆ.

ಇರುವೆಯ ತಲೆಯಲ್ಲಿ ಹಲವು ಸ್ಪರ್ಶೇಂದ್ರಿಯಗಳಿವೆ. ಇರುವೆಯು ನೊಣದಂತೆ ಸಂಕೀರ್ಣ ಕಣ್ಣುಗಳನ್ನು ಹೊಂದಿರುವುದು. ಈ ಸಂಕೀರ್ಣ ಕಣ್ಣು ಒತ್ತಾಗಿ ಜೋಡಿಸಲ್ಪಟ್ಟಿರುವ ಹಲವು ಸಣ್ಣಸಣ್ಣ ಮಸೂರಗಳಿಂದ ಕೂಡಿದ್ದು ಸುತ್ತಲಿನ ಅತಿ ಸೂಕ್ಷ್ಮ ಚಲನೆಗಳನ್ನು ಸಹ ಗುರುತಿಸುವಲ್ಲಿ ಸಹಕಾರಿಯಾಗಿದೆ. ಇವುಗಳ ಜೊತೆಗೆ ಇರುವೆಯು ಎರಡು ಸರಳ ಕಣ್ಣುಗಳನ್ನು ತಲೆಯ ಮೇಲ್ಭಾಗದಲ್ಲಿ ಹೊಂದಿದ್ದು ಇವು ಬೆಳಕನ್ನು ಗ್ರಹಿಸುವಲ್ಲಿ ನೆರವಾಗುತ್ತವೆ.

ಇವುಗಳ ಹೊರತಾಗಿಯೂ ಇರುವೆಗಳ ದೃಷ್ಟಿ ಬಲು ಮಂದ ಮತ್ತು ಹಲವು ತಳಿಯ ಇರುವೆಗಳು ಪೂರ್ತಿ ಕುರುಡು. ಇದಕ್ಕೆ ಅಪವಾದವೆಂಬಂತೆ ಆಸ್ಟ್ರೇಲಿಯಾದ ಬುಲ್ ಡಾಗ್ ಇರುವೆಯು ಅತಿ ಸೂಕ್ಷ್ಮದೃಷ್ಟಿಯನ್ನು ಹೊಂದಿದೆ. ತಲೆಯ ಭಾಗಕ್ಕೆ ಸೇರಿದಂತೆ ಇರುವೆಯು ಎರಡು ಫೀಲರ್ ಎಂದು ಕರೆಯಲ್ಪಡುವ ಗ್ರಾಹಕಕಡ್ಡಿಗಳನ್ನು (ಮೀಸೆ) ಹೊಂದಿರುತ್ತದೆ. ಈ ಗ್ರಾಹಕಗಳು ರಾಸಾಯನಿಕಗಳನ್ನು ಗುರುತಿಸುವಲ್ಲಿ ಇರುವೆಗೆ ಸಹಕಾರಿಯಾಗಿವೆ. ಜೊತೆಗೆ ಇರುವೆಗೆ ಈ ಮೀಸೆಗಳು ಸಂಪರ್ಕಸಾಧನವಾಗಿ ಸಹ ಬಳಕೆಗೆ ಬರುತ್ತವೆ.

© ಶ್ರೇಯಸ್ ಸ್ವಾಮಿ

ಇತರ ಇರುವೆಗಳು ಹೊರಸೂಸಿದ ಫೆರೊಮೋನ್ ಪತ್ತೆಹಚ್ಚುವಲ್ಲಿಯೂ ಸಹ ಮೀಸೆ ಬಳಸಲ್ಪಡುವುದು. ಈ ಗ್ರಾಹಕಗಳು ತನ್ನ ಮುಂದಿರುವ ವಸ್ತುವಿನ ಬಗ್ಗೆ ತಿಳಿಯಲು ಇರುವೆಗೆ ನೆರವಾಗುತ್ತವೆ. ಇರುವೆಯ ಶಿರದಲ್ಲಿ ಎರಡು ಬಲಿಷ್ಠ ಒಸಡುಗಳು ಇದ್ದು, ಇವು ನಾನಾ ರೀತಿಯಲ್ಲಿ ಬಳಸಲ್ಪಡುತ್ತವೆ. ಇವುಗಳ ಮೂಲಕ ಇರುವೆಯು ಆಹಾರವನ್ನು ಹೊತ್ತೊಯ್ಯುವುದು, ವಸ್ತುಗಳನ್ನು ಅಲ್ಲಿಂದಿಲ್ಲಿಗೆ ಎತ್ತಿಡುವುದು, ಗೂಡುಗಳನ್ನು ನಿರ್ಮಿಸುವುದು ಮತ್ತು ತನ್ನ ರಕ್ಷಣೆಗೆ ಆಯುಧವನ್ನಾಗಿ ಸಹ ಬಳಸುವುದು.

© ಸುಧೀಂದ್ರ ರಾವ್
© ಶಶಾಂಕ್ ಎಸ್ ಬಿ

ಕೆಲ ತಳಿಗಳ ಇರುವೆಗಳು ಬಾಯಿಯ ಒಳಗೆ ಸಣ್ಣ ಚೀಲವನ್ನು ಹೊಂದಿದ್ದು ಇವುಗಳಲ್ಲಿ ಇರುವೆಯು ತನ್ನ ಸಂಗಾತಿಗಳಿಗೆ ಅಥವಾ ಮೊಟ್ಟೆಯೊಡೆದು ಬಂದ ಎಳೆಯ ಲಾರ್ವಾಗಳಿಗಾಗಿ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು. ‘ಥೊರಾಕ್ಸ್’ ಎಂದು ಕರೆಯಲ್ಪಡುವ ಇರುವೆಯ ಮುಂಡದಲ್ಲಿ ಆರು ಕಾಲುಗಳಿರುತ್ತವೆ. ಪ್ರತಿ ಕಾಲಿನ ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಉಗುರಿನ ರಚನೆಯಿದ್ದು ಇದು ಇರುವೆಗೆ ಹತ್ತುವಲ್ಲಿ ಮತ್ತು ವಸ್ತುಗಳಿಗೆ ಜೋತುಬೀಳುವುದಕ್ಕೆ ನೆರವಾಗುತ್ತದೆ.

ಹೆಚ್ಚಾಗಿ ರಾಣಿ ಇರುವೆ ಮತ್ತು ಗಂಡಿರುವೆಗಳು ರೆಕ್ಕೆಗಳನ್ನು ಹೊಂದಿರುತ್ತವೆ. ರಾಣಿಗಳು ತಮಗೆ ಸಂಗಾತಿ ದೊರೆತ ನಂತರ ರೆಕ್ಕೆಗಳನ್ನು ಉದುರಿಸಿಬಿಡುತ್ತವೆ. ಇರುವೆಯ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಪ್ರಮುಖ ಅಂಗಗಳು ಮತ್ತು ಜನನಾಂಗಗಳು ಇರುತ್ತವೆ. ಹಲವು ಜಾತಿಯ ಇರುವೆಗಳು ಕೊಂಡಿಗಳನ್ನು ಪಡೆದಿದ್ದು ಇವು ತಮ್ಮ ಮತ್ತು ತಮ್ಮ ಗೂಡಿನ ರಕ್ಷಣೆಗಾಗಿ ಆಯುಧಗಳಂತೆ ಬಳಸುತ್ತವೆ.

ತ್ವರಿತ ಟಿಪ್ಪಣಿ

 • ಇರುವೆಯು ವರ್ಗೀಕರಣದ ಪ್ರಕಾರ ‘ಹೈಮೆನೋಪೆಟ್ರಾ’ ವರ್ಗದಲ್ಲಿ ‘ಫಾರ್ಮಿಸೀಡೇ’ ಕುಟುಂಬಕ್ಕೆ ಸೇರಿದ ಜೀವಿ.
 • ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬದ ಜೀವನಕ್ಕೆ ಹೆಸರಾಗಿವೆ.
 • ಇರುವೆಗಳಿಗೆ ಕಿವಿಗಳು ಇಲ್ಲ. ಅದು ತನ್ನ ಕಾಲುಗಳ ಸಹಾಯದಿಂದ ನೆಲದ ಮೂಲಕ ಕಂಪನವನ್ನು ಗ್ರಹಿಸುತ್ತದೆ.
 • ಪುರುಷ ಇರುವೆಗಳಿಗೆ ಜೀವನದ ಏಕೈಕ ಕೆಲಸವೆಂದರೆ ರಾಣಿ ಜೊತೆ ಮಿಲನ ನಡೆಸುವುದು. ಈ ಕೆಲಸ ಮುಗಿಸಿದ ಬಳಿಕ ಅವು ಸತ್ತೇ ಹೋಗುತ್ತವೆ.
 • ಇರುವೆಗಳು ತಮ್ಮ ತೂಕಕ್ಕಿಂತ ಹಲವಾರು ಪಟ್ಟು ಹೆಚ್ಚು ತೂಕವನ್ನು ಎತ್ತಬಲ್ಲವು, ಎತ್ತಿಕೊಂಡು ಸಾಗಬಲ್ಲವು. ಕೇವಲದವಡೆಯಲ್ಲಿ ೫೦೦ ಮಿಗ್ರಾಂ ಭಾರ ಎತ್ತುವ ಶಕ್ತಿ ಅವುಗಳಿಗಿದೆ. ಇರುವೆ ತನ್ನ ದೇಹದ ತೂಕಕ್ಕಿಂತ ೨೦ ರಷ್ಟು ಭಾರವನ್ನು ಎತ್ತಬಲ್ಲದು.
 • ಜಗತ್ತಿನಲ್ಲಿ ಎಷ್ಟೊಂದು ಇರುವೆಗಳು ಇವೆ ಎಂದರೆ ಜಗತ್ತಿನ ಎಲ್ಲ ಮನುಷ್ಯರ ತೂಕಕ್ಕಿಂತ ಇರುವೆಗಳ ತೂಕವೇ ಹೆಚ್ಚು!
 • ಯಾವಾಗ ಒಂದು ಇರುವೆ ಇನ್ನೊಂದು ಇರುವೆಯೊಡನೆ ಯುದ್ಧವನ್ನು ಮಾಡುತ್ತದೆಯೋ, ಆ ಸಮಯದಲ್ಲಿ ಅದು ಸಾವನ್ನಪ್ಪುತ್ತದೆ.
 • ರಾಣಿ ಇರುವೆಯ ಆಯಸ್ಸು ೩೦ ವರ್ಷ. ಆದರೆ, ಕಾರ್ಮಿಕ ಇರುವೆಗಳು ಬದುಕುವುದು ಕೇವಲ ಮೂರು ವರ್ಷ ಮಾತ್ರ!, ಇನ್ನೂ ಕೆಲವು ಇರುವೆಗಳು ಬದುಕುವುದು ೪೫ ರಿಂದ ೬೦ ದಿನಗಳು ಮಾತ್ರ.
 • ಸೈನಿಕ ಇರುವೆಗಳ ಕೆಲಸದ ವೇಗ ಮತ್ತು ಹಸಿವು ಎಷ್ಟಿದೆಯೆಂದರೆ ಅವು ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಪ್ರಾಣಿಗಳನ್ನು ತಿಂದು ತೇಗಬಲ್ಲವು!
 • ಇದರ ದವಡೆಗಳು ಬದಿಗೆ ಇದ್ದು. ಇದು ಆಹಾರವನ್ನು ಕತ್ತರಿಯಂತೆ ಕತ್ತರಿಸುತ್ತವೆ.
 • ಪ್ರತಿಯೊಂದು ಇರುವೆಗಳ ಸಮೂಹದಲ್ಲಿ ಒಂದು ಅಥವಾ ಎರಡು ರಾಣಿ ಇರುವೆಗಳಿರುತ್ತವೆ.
 • ಕೆಂಪು ಇರುವೆಗೆ ಮುಳ್ಳು ಇರುತ್ತದೆ. ಅದರಿಂದ ಇದು ತನ್ನ ಗೂಡನ್ನು ರಕ್ಷಿಸುತ್ತದೆ.
 • ಇರುವೆಗೆ ಎರಡು ಕಣ್ಣುಗಳಿದ್ದು, ಪ್ರತಿಯೊಂದರಲ್ಲಿ ಅನೇಕ ಸಣ್ಣ ಸಣ್ಣ ಕಣ್ಣುಗಳು ಇರುತ್ತವೆ. ಅದಕ್ಕೆ ಸಂಯುಕ್ತ ಕಣ್ಣುಗಳು ಎನ್ನುತ್ತಾರೆ.
 • ಇರುವೆಯ ಮೆದುಳಿನಲ್ಲಿ ಸುಮಾರು ೨,೫೦,೦೦೦ ನರ ಕೋಶಗಳಿರುತ್ತವೆ.
 • ಪ್ರತಿ ಇರುವೆಯು ತನ್ನ ಕಾಲಿನಲ್ಲಿ ಆರು ಬೆರಳುಗಳನ್ನು ಹೊಂದಿರುತ್ತದೆ.
 • ಇರುವೆಗಳಿಗೆ ಶ್ವಾಸಕೋಶ ಇಲ್ಲ. ಇದು ತನ್ನ ಸಣ್ಣ ರಂಧ್ರದ (ಸ್ಪಿರಾಕಲ್ಸ್) ಮೂಲಕ ಆಮ್ಲಜನಕವನ್ನು ತನ್ನ ದೇಹಕ್ಕೆ ತೆಗೆದುಕೊಳ್ಳುತ್ತದೆ ಮತ್ತು ಟ್ರಾಕ್ಚೆಲ್ ಟ್ಯೂಬ್ಗಳು ಎಂಬ ಸಣ್ಣ ಟ್ಯೂಬ್ಗಳ ಮೂಲಕ ಆಮ್ಲಜನಕವುದೇಹದಲ್ಲಿ ಹರಡುತ್ತದೆ. ಟ್ರಾಕ್ಚೆಲ್ ಟ್ಯೂಬ್ ಇರುವೆ ಬಯಸಿದಲ್ಲಿ ತೆರೆಯಬಹುದು ಅಥವಾ ಮುಚ್ಚಬಹುದು.
 • ದಕ್ಷಿಣ ಅಮೆರಿಕ ಸೈನಿಕ ಇರುವೆಯ ಒಂದು ಗೂಡಿನಲ್ಲಿ ಸುಮಾರು ೭,೦೦,೦೦೦ ಇರುವೆಗಳು ವಾಸಿಸುತ್ತವೆ.
 • ಇರುವೆಗಳಲ್ಲಿ ಸುಮಾರು ೧೦,೦೦೦ ಪ್ರಭೇದಗಳು ಇವೆ.
 • ಒಂದೇ ಗೂಡಿನಲ್ಲಿ ಎರಡು ವಿಭಿನ್ನ ಜಾತಿಯ ಇರುವೆಗಳು ಜೊತೆ ಜೊತೆಯಾಗಿ ವಾಸಿಸುತ್ತವೆ.
 • ಇವುಗಳಿಗೆ ಸಿಹಿಯಾದ ಆಹಾರಗಳೆಂದರೆ ತುಂಬಾ ಇಷ್ಟ, ಅದಕ್ಕಾಗಿ ಇವು ಸಿಹಿಯಾದ ಆಹಾರಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತವೆ.
 • ಇರುವೆಗೆ ಹೊಟ್ಟೆಯು ಎರಡು ಭಾಗಗಳಾಗಿರುತ್ತವೆ. ಒಂದರಲ್ಲಿ ತನಗಾಗಿ ಆಹಾರ ಸಂಗ್ರಹಿಸುತ್ತವೆ. ಎರಡನೆಯದರಲ್ಲಿ ಇದು ಆಹಾರವನ್ನು ಬೇರೆ ಇರುವೆಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಮೀಸಲಿಟ್ಟಿರುತ್ತದೆ.
 • ಇರುವೆಗಳಿಗೆ ಮೂಗು ತುಂಬಾ ಸೂಕ್ಷ್ಮವಾಗಿರುವುದರಿಂದ ಇವುವಾಸನೆಯನ್ನು ತುಂಬಾ ದೂರದಿಂದಲೇ ಗ್ರಹಿಸುತ್ತವೆ.
 • ಇರುವೆಯ ದೇಹವನ್ನು ಮನುಷ್ಯನ ದೇಹಕ್ಕೆ ಹೋಲಿಸಿದಾಗ ಇರುವೆಯ ವೇಗದಲ್ಲಿ ಮನುಷ್ಯ ಓಡಬೇಕಾದರೆ, ಅವನು ಜೂಜಿನ ಕುದುರೆಯ ವೇಗದಲ್ಲಿ ಓಡಬೇಕಾಗಬಹುದು.
ರಾಮಕೃಷ್ಣ ಹೊಸಬೆಟ್ಟು

ನಿಮ್ಮ ಕಾಮೆಂಟ್

Please enter your comment!
Please enter your name here