ಸಂಚಿಕೆ-೧-ಕಾಡು ಸೊಗಡು – ಕುಟ್ರುಪಕ್ಷಿಯ ಸಾಲ

0
196

ನಾನು ಮೂಲತಃ ಮಂಗಳೂರಿನ ಕೃಷ್ಣಾಪುರದವನು. ನಾನು ಬೆಳೆದ ಪರಿಸರ, ಅತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ  ಅಲ್ಲ. ಅಂತಹ ಪರಿಸರದಲ್ಲಿ ಬೆಳೆದ ನನಗೆ ಉಜಿರೆ ಎಂಬ ಪುಟ್ಟ ಹಳ್ಳಿಗೆ ಹೋಗುವುದು ಎಂದರೆ ಎಲ್ಲಿಲ್ಲದ ಸಂಭ್ರಮ.  ಉಜಿರೆಯಲ್ಲಿ ನನ್ನ ಅತ್ತೆಯ (ತಂದೆಯ ಅಕ್ಕನ) ಮನೆ ಇತ್ತು. ನಾನು ಅವರನ್ನು ಉಜಿರೆ ಆಂಟಿ, ಉಜಿರೆ ಅಂಕಲ್ ಎಂದೇ ಕರೆಯುತ್ತಿದ್ದೆ. ಅವರದು ಅಪ್ಪಟ ಕೃಷಿ ಜೀವನ, ತೆಂಗು, ಕಂಗು, ಬಾಳೆ, ಗೇರು, ಭತ್ತ ಮತ್ತು ತರಕಾರಿ ಬೆಳೆಯುತ್ತಿದ್ದರು. ಅವರ ಮನೆಯ ಪರಿಸರದ ಬಗ್ಗೆ ಹೇಳುವುದಾದರೆ, ಅದು ಒಂದು ಅಪ್ಪಟ ಹಳ್ಳಿಯ ಪರಿಸರ, ಹಚ್ಚ ಹಸುರಿನ ಗದ್ದೆ, ಬೆಟ್ಟ, ಝರಿ, ಕಾಡು ಇವುಗಳಿಂದ ಸುತ್ತುವರೆದಿತ್ತು. ಆ ಕಾಡಿನ ತರಗೆಲೆಯ ಮೇಲೆ ನಡೆದಾಡುವುದು, ಸಣ್ಣ ಝರಿಯ ದಾಟಲು ಹಾಕಿದ ಮರದ ಸಂಕ (ಸೇತುವೆ)  ಬೀಳದ ಹಾಗೆ ಮೆಲ್ಲನೆ ಹೆದರಿ ಹೆದರಿ ದಾಟುವುದು, ಇದನೆಲ್ಲಾ ಈಗ ನೆನಪಿಸಿ ಕೊಂಡರೆ, ನಮ್ಮ ಬಾಲ್ಯದ ಜೀವನ ಎಷ್ಟು ಸುಂದರವಾಗಿತ್ತು ಎಂದೆನಿಸುತ್ತದೆ.  ನಾವು ಬೇಸಿಗೆ ರಜೆಯಲ್ಲಿ ಉಜಿರೆಗೆ ಹೋದರೆ ನಮಗೆ ಒಂದು ತಿಂಗಳು ಹೇಗೆ ಕಳೆಯಿತು ಎಂದು ಗೊತ್ತಾಗುತ್ತಿರಲಿಲ್ಲ.

‘ಕಾಡುನಾಡು’ ಪತ್ರಿಕೆಯ ಈ ಅಂಕಣದ ಮೂಲಕ ನಾನು ಉಜಿರೆಯಲ್ಲಿ ಕಳೆದ ಸುಂದರ ಕ್ಷಣಗಳು ಹಾಗೂ ಉಜಿರೆ ಅಂಕಲ್ ಹೇಳುತಿದ್ದ ಪರಿಸರದ ಕಥೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಉಜಿರೆ ಅಂಕಲ್ ಹೇಳಿದ ಒಂದು ಹಕ್ಕಿಯ ಕಥೆ ನನಗೆ ಈಗಲೂ ನೆನಪಿದೆ.

ಒಂದು ಹಳ್ಳಿಯಲ್ಲಿ ಒಬ್ಬ ಧನಿಕನಿದ್ದನು. ಅವನು ಯಾರಿಗಾದರೂ ಹಣದ ಅವಶ್ಯಕತೆ ಇದ್ದರೆ, ಬಡ್ಡಿರಹಿತ ಸಾಲ ಕೊಡುತ್ತಿದ್ದನು. ಆದರೆ, ಸಾಲವನ್ನು ಬೇಗನೆ ಹಿಂತಿರುಗಿಸದಿದ್ದಲ್ಲಿ ಧನಿಕನು, ಸಾಲಗಾರನನ್ನು ಎಡೆಬಿಡದೆ ಸಾಲ ಹಿಂತಿರುಗಿಸುವಂತೆ ಪೀಡಿಸುತ್ತಿದ್ದನು. ಅದೇ ಹಳ್ಳಿಯಲ್ಲಿ ಕುಕುರು ಶೆಟ್ಟಿ ಎಂಬ ಒಬ್ಬ ರೈತನಿದ್ದ. ಅವನಿಗೆ ಒಂದು ಸಾರಿ ಹಣದ ಅವಶ್ಯಕತೆ ಬಂತು. ಎಲ್ಲರಂತೆ ಅವನೂ ಕೂಡ ಧನಿಕನ ಬಳಿ ಹೋಗಿ, ತನ್ನ ಕಷ್ಟವನ್ನು ವಿವರಿಸಿ, ತನಗೆ ಸಾಲ ಕೊಡುವಂತೆ ಕೇಳಿಕೊಂಡ. ಸಾಲ ಕೊಡುವುದಾಗಿ ಒಪ್ಪಿದ ಧನಿಕ, ಒಂದು ತಿಂಗಳ ಒಳಗಾಗಿ ಕೊಟ್ಟ ಹಣವನ್ನು ಹಿಂತಿರುಗಿಸಬೇಕೆಂಬ ಷರತ್ತು ವಿಧಿಸಿದನು. ಹೇಳಿದ ಸಮಯದಲ್ಲಿ ಹಣವನ್ನು ಹಿಂತಿರುಗಿಸಲಾಗದಿದ್ದಲ್ಲಿ ನಾನು ಸದಾ ನಿನ್ನ ಬೆನ್ನುಹತ್ತಿ, ಕೊಟ್ಟ ಸಾಲವನ್ನು ಮರಳಿಸುವಂತೆ ಪೀಡಿಸುತ್ತಿರುತ್ತೇನೆ ಎಂದು ಧನಿಕನು ರೈತನಿಗೆ ಸ್ಪಷ್ಟವಾಗಿ ಹೇಳಿದನು. ಆ ರೈತ ಷರತ್ತಿಗೆ ಒಪ್ಪಿ ಧನಿಕನ ಬಳಿ ಸಾಲ ಪಡೆದ. ಸಾಲ ಪಡೆದು ಒಂದು ತಿಂಗಳ ಮೇಲಾದರೂ ಸಾಲ ವಾಪಸ್ಸು ಬಾರಾದಾಗ, ಧನಿಕನು ಪ್ರತಿದಿನ ಕುಕುರು ಶೆಟ್ಟಿ ಮನೆಗೆ ಹೋಗಿ, ತನ್ನ ಹಣವನ್ನು ಹಿಂತಿರುಗಿಸು ಎಂದು ಪೀಡಿಸತೊಡಗಿದ. ಹೀಗೆಯೇ ಒಂದು ವರ್ಷ ಕಳೆದರೂ, ಕೊಟ್ಟ ಹಣ ಧನಿಕನಿಗೆ ವಾಪಸ್ಸು ಸಿಗಲೇ ಇಲ್ಲ.  ಇದೇ ದುಃಖದಲ್ಲಿ ಒಂದು ದಿನ ಧನಿಕನ ಪ್ರಾಣ ಪಕ್ಷಿಯು ಹಾರಿ ಹೋಯಿತು. ಅದೇ ಧನಿಕ, ಕುಟ್ರುಪಕ್ಷಿಯಾಗಿ (White cheeked Barbet) ಹುಟ್ಟಿ, ಈಗಲೂ ಸಹ ಕುಕುರು ಶೆಟ್ಟಿಗೆ ಕೊಟ್ಟ ಸಾಲ ವಾಪಸ್ಸು ಕೇಳುತ್ತಾ ಇರುತ್ತಾನೆ – “ಕುಕುರು ಶೆಟ್ಟಿ ಕೊರು ಕೊರು ಕೊರು ಕೊರು ಕೊರು…..” (ತುಳುವಿನಲ್ಲಿ ಕೊರು ಎಂದರೆ ಕೊಡು).

ಇಂತಹ ಹಳ್ಳಿಯ ಸೊಗಡಿನ ಕಥೆಗಳನ್ನು ಕೇಳಿಕೊಂಡು, ಉಜಿರೆಯಲ್ಲಿ ನಮ್ಮ ಬಾಲ್ಯದ ಸುಂದರ ಕ್ಷಣಗಳನ್ನು ಕಳೆದ ನಾವು ಅದೃಷ್ಟವಂತರೇ ಸರಿ.

ಕಾಡು ಬೆಳೆಸಿ ನಾಡು ಉಳಿಸಿ.

ವಸುಧೀಶ ಹೆಚ್

ನಿಮ್ಮ ಕಾಮೆಂಟ್

Please enter your comment!
Please enter your name here