ಸಂಚಿಕೆ – ೩ – ಸಂಚಿಕೆಯ ಛಾಯಾಗ್ರಾಹಕರು – ಶ್ರೀ ರಾಘವೇಂದ್ರ ಪತ್ತರ್

0
129
ರಾಘವೇಂದ್ರ ಪತ್ತರ್

ಈ ಸಂಚಿಕೆಯ ಛಾಯಾಗ್ರಾಹಕರು ಶ್ರೀ ರಾಘವೇಂದ್ರ ಪತ್ತರ್.

ದೊಡ್ಡ ಚಾಣ – © ರಾಘವೇಂದ್ರ ಪತ್ತರ್

ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರು ಮೂಲತಃ ಬೆಳಗಾಂ ಜಿಲ್ಲೆಯ ಬೈಲುಹೊಂಗ್ಲ ಗ್ರಾಮದವರು. ಇವರ ತಂದೆ ಡಾ. ವಿ.ಎಂ. ಪತ್ತರ್ ರವರು ೨೦ ವರ್ಷಗಳ ಕಾಲ ಲಾಲ್ ಬಾಗಿನ ತೋಟಗಾರಿಕೆ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಲಾಲ್ ಬಾಗಿನ ಇಂದಿನ ಸಸ್ಯ ವೈಭೋಗಕ್ಕೆ ಡಾ. ವಿ.ಎಂ. ಪತ್ತರ್ ರವರ ಕೊಡುಗೆ ಬಹಳ ಮುಖ್ಯ. ರಾಘವೇಂದ್ರರವರ ತಾಯಿ ಶೋಭಾ ಪತ್ತರ್ ಒಬ್ಬ ಗೃಹಿಣಿ ಹಾಗು ಪತ್ತರ್ ಕುಟುಂಬದ ಬೆನ್ನೆಲಬು. ರಾಘವೇಂದ್ರರವರು ಛಾಯಾಗ್ರಹಣ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆಗಳಿಗೆ ತಮ್ಮ ಪತ್ನಿಯಾದ ಉಮಾ ಪತ್ತರ್ ರವರ ಸಹಕಾರವನ್ನು ಬಹಳ ಗರ್ವದಿಂದ ನೆನೆಯುತ್ತಾರೆ. ಉಮಾಅವರು ರಾಘವೇಂದ್ರರವರ ಛಾಯಾಚಿತ್ರಗಳಿಗೆ ಒಳ್ಳೆಯ ವಿಮರ್ಶಕರೂ ಆಗಿದ್ದಾರೆ. ಪ್ರಸ್ತುತ ರಾಘವೇಂದ್ರರವರು ಪ್ರತಿಷ್ಠಿತ ಐಟಿ ಕಂಪನಿ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಛಾಯಾಗ್ರಹಣದ ಪಯಣವನ್ನು ಅವರು ಈ ರೀತಿಯಾಗಿ ನಮ್ಮೊಂದಿಗೆ ಹಂಚಿಕೊಂಡರು.

ನನಗೆ ಛಾಯಾಗ್ರಹಣ ಮಾಡಲು ದೊಡ್ಡ ಪ್ರೇರಣೆಯೆಂದರೆ ಅದು ನನ್ನ ತಾತ, ಎಂ.ವಿ. ಪತ್ತರ್ ರವರು. ತಾತನವರು ಒಬ್ಬ ದೊಡ್ಡ ಚಿತ್ರಕಲಾ ನಿಪುಣರಾಗಿದ್ದರು. ಸುರೇಶ್ ಹೆಬ್ಳಿಕರ್, ಗಿರೀಶ್ ಕಾರ್ನಾಡ್ ಮತ್ತು ಹಲವಾರು ಐಪಿಎಸ್ ಅಧಿಕಾರಿಗಳು ಇವರಲ್ಲಿ ಚಿತ್ರಕಲೆ ಕಲಿಯಲು ಬರುತ್ತಿದ್ದರು.

ನಾನು ೮ ವರ್ಷದ ಹುಡುಗನಾಗಿದ್ದಾಗಿಂದಲೇ ಛಾಯಾಗ್ರಹಣದಲ್ಲಿ ಆಸಕ್ತಿ ಇತ್ತು. ನನಗೆ ಸಿಗುತ್ತಿದ್ದ ಜೇಬು ಖರ್ಚಿನ ಹಣವನ್ನು ಉಳಿಸಿ ಕ್ಯಾಮೆರಾ ರೋಲ್ಗಳನ್ನು ಖರೀದಿಸುತ್ತಿದ್ದೆ. ನಾನು ಉದ್ಯೋಗದಲ್ಲಿ ದುಡಿಯಲು ಶುರುಮಾಡಿ ಆರ್ಥಿಕವಾಗಿ ಅನಿರ್ಬಂಧಿತನಾದ ನಂತರಛಾಯಾಗ್ರಹಣವನ್ನು ೨೦೦೬ರಿಂದ ಬಹಳ ಗಂಭೀರವಾಗಿ ಪರಿಗಣಿಸತೊಡಗಿದೆ. ರೋಲ್ ಕ್ಯಾಮೆರಾದಿಂದ ಪ್ರಯಾಣವನ್ನು ಶುರು ಮಾಡಿದ ನಾನು ಈಗ ಡಿಜಿಟಲ್ ಕ್ಯಾಮರಾಗಳನ್ನು ಬಳಸುತ್ತೇನೆ.

ನೀಲಿಬಾಲದ ಕಳ್ಳಿಪೀರ – © ರಾಘವೇಂದ್ರ ಪತ್ತರ್

ಪರಿಸರ ನಾಶ ಮಾಡುವುದರಿಂದ ಆಗುವ ಭೀಕರ ಪರಿಣಾಮಗಳನ್ನು ನೆನೆದರೆ ಮನಃ ಕಂಪನವಾಗುತ್ತದೆ. ನನ್ನ ಛಾಯಾಗ್ರಹಣದ ಮೂಲಕ ಮುಂದಿನ ಪೀಳಿಗೆಗೆ ಒಂದು ಸಂದೇಶವನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ. ಛಾಯಾಗ್ರಹಣವು ಒಂದು ಪ್ರಬಲವಾದ ಅಸ್ತ್ರ, ಇದನ್ನು ಬಳಸಿಕೊಂಡು ಸಾಮಾಜಿಕ ಸಂದೇಶಗಳನ್ನು ಜನರಿಗೆ ಮನವರಿಕೆಯಾಗುವ ರೀತಿಯಲ್ಲಿ ತೋರಿಸಬಹುದು.

ಯಾವುದೇ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅವುಗಳ ಜೀವನ ಚಕ್ರವನ್ನು ಅಧ್ಯಯನ ಮಾಡಿ, ಅದನ್ನು ಸಂಪೂರ್ಣವಾಗಿ ದಾಖಲಿಸುವುದು ತುಂಬಾ ಮುಖ್ಯ. ನಾನು ಮೊದಲಿಗೆ ಅಧ್ಯಯನ ಮಾಡಲು ‘ನೀಲಿ ಬಾಲದ ಕಳ್ಳಿಪೀರ (Blue tailed Bee eater)’ ವನ್ನು ಅಯ್ದುಕೊಂಡೆ. ಈ ಪಕ್ಷಿಗಳು ಇಡೀ ಭಾರತದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯ. ಅದೃಷ್ಟವಶಾತ್ ಈ ಹಕ್ಕಿಗಳನ್ನು ಮೈಸೂರಿನಲ್ಲಿರುವ ನಗುವನಹಳ್ಳಿ ಎಂಬ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಈ ಕಳ್ಳಿಪೀರಗಳ ಜೀವನ ಚಕ್ರವನ್ನು ಸಂಪೂರ್ಣವಾಗಿ ಅಧ್ಯಯಿಸಿ, ಅದರ ಪ್ರತಿಯೊಂದು ವಿವರವನ್ನು ದಾಖಲಿಸಿದ್ದೇನೆ. ಕಳ್ಳಿಪೀರಗಳ ಅಧ್ಯಯನಕ್ಕಾಗಿ ನಾನು ೨ ವರ್ಷಗಳ ಕಾಲ ಶ್ರಮಿಸಿದ್ದೇನೆ. ಆ ೨ ವರ್ಷಗಳಲ್ಲಿ ಈ ಹಕ್ಕಿಗಳು ನನ್ನ ಕುಟುಂಬದ ಅವಿಭಾಜ್ಯ ಅಂಗವೆಂದೆನಿಸಿದವು ಮತ್ತು ೨ ಋತುಗಳು ಹೇಗೆ ಕಳೆದುಹೋದವು ಎಂಬುದೇ ನನಗೆ ಗೊತ್ತಾಗಲಿಲ್ಲ.

ಕೆಂಪು ರಾಟವಾಳ – © ರಾಘವೇಂದ್ರ ಪತ್ತರ್
ಕೆಂಪು ರಾಟವಾಳ – © ರಾಘವೇಂದ್ರ ಪತ್ತರ್
ಹಾಲಕ್ಕಿ – © ರಾಘವೇಂದ್ರ ಪತ್ತರ್

ಹೀಗೆ ಒಂದೇ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ ತಜ್ಞತೆ ಪಡೆದುಕೊಳ್ಳಲು ನನಗೆ ನನ್ನ ಗುರುಗಳಾದ ರಘುರಾವ್ ಅವರು ಪ್ರೇರೇಪಿಸಿದರು. ಹೀಗೆ ಮಾಡುವುದರಿಂದ ಜನರಲ್ಲಿ ಆ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ ಅರಿವು ಹೆಚ್ಚಾಗಿ, ನಮ್ಮ ಶ್ರಮಕ್ಕೆ ಜನರ ಬೆಂಬಲ ಸಿಗುತ್ತದೆ. ರಘುರಾವ್ ರವರು ಏನ್.ಜಿ ಟ್ರಾವೆಲ್ಲರ್ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಾರೆ. ನಾನು ಈಗಾಗಲೇ ೨-೩ ಜಾತಿಯ ಪಕ್ಷಿಗಳ ಮೇಲೆ ಅಧ್ಯಯನ ಮಾಡಿ, ಅವುಗಳನ್ನು ದಾಖಲಿಸಿದ್ದೇನೆ. ಇಂತಹ ಅಧ್ಯಯನಗಳನ್ನು ಮಾಡುವಾಗ ಅಥವಾ ಪ್ರಾಣಿ ಪಕ್ಷಿಗಳ ಛಾಯಾಗ್ರಹಣವನ್ನು ಹವ್ಯಾಸಕ್ಕಾಗಿ ಮಾಡುವಾಗ, ಪ್ರಾಣಿಪಕ್ಷಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಬಹಳ ಮುಖ್ಯ.

ನಾನು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತೇನೆ. ಈ ರೀತಿಯಾಗಿ ಲೇಖನ ಬರೆಯುವಾಗ, ಜನರು ಅದನ್ನು ಹೇಗೆ ಗ್ರಹಿಸುತ್ತಾರೆ ಎಂಬುವ ಮುಂದಾಲೋಚನೆಯಿಂದ ತುಂಬಾ ಜವಾಬ್ದಾರಿಯುತವಾಗಿ ಬರೆಯಬೇಕು.

ವನ್ಯಜೀವಿಗಳ ಅಳಿವು ಉಳಿವಿಗೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಮನುಷ್ಯರೇ ಕಾರಣ. ಹೀಗಾಗಿ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಶಾಲೆಗಳಿಂದಲೇ ಶುರುವಾಗಬೇಕು. ಪರಿಸರದ ಜೊತೆಗಿನ ಒಡನಾಟವನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿಸಿ ಹೇಳಬೇಕು. ಕಾಡಿನಲ್ಲಿ ಮಾತ್ರವಲ್ಲದೆ ನಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಬಗ್ಗೆಯೂ ಮಕ್ಕಳಲ್ಲಿ ಕಾಳಜಿ ಮೂಡಿಸಬೇಕು. ಇಂದಿನ ಪೀಳಿಗೆಯು ಕೇವಲ ಆರ್ಥಿಕ ಬೆಳವಣಿಗೆಗೆ ಪ್ರಾಮುಖ್ಯತೆಯನ್ನು ಕೊಟ್ಟು, ಪರಿಸರ ಸಂರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದಾಗಿ ಮುಂದೆ ಉಂಟಾಗಲಿರುವ ಅನಾಹುತಗಳ ಬಗ್ಗೆ ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು, ಪರಿಸರ ಸಂರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಚಂದ್ರಮುಕುಟ – © ರಾಘವೇಂದ್ರ ಪತ್ತರ್
ಹಾಲಕ್ಕಿ – © ರಾಘವೇಂದ್ರ ಪತ್ತರ್

ರಾಘವೇಂದ್ರ ಪತ್ತರ್ ರವರು ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದರೂ, ನಾಗರಹೊಳೆ ಅಭಯಾರಣ್ಯದಲ್ಲಿ ೫ ವರ್ಷಗಳ ಹಿಂದೆ ೧೦ ಅಡಿ ದೂರದಲ್ಲಿ ಕಂಡಂತಹ ಚಿರತೆಯ ಬಗ್ಗೆ ಹಾಗು ಅದರೊಂದಿಗೆ ಕಳೆದ ೨೦ ರೋಮಾಂಚನಕಾರಿ ನಿಮಿಷಗಳನ್ನು ಬಹಳ ಮುಗ್ಧವಾಗಿ ಇಂದಿಗೂ ನೆನೆಯುತ್ತಾರೆ. ರಾಘವೇಂದ್ರ ಪತ್ತರ್ ರವರಭವಿಷ್ಯದ ಯೋಜನೆಗಳಿಗೆ ಕಾಡುನಾಡು ತಂಡದ ವತಿಯಿಂದ ಶುಭ ಹಾರೈಸುತ್ತೇವೆ.

ನಿಮ್ಮ ಕಾಮೆಂಟ್

Please enter your comment!
Please enter your name here