ನಾನು ಕಂಡ ಕೀನ್ಯ

0
1240

ನಾನು (ಅನಂತ ಮೂರ್ತಿ) ೮ ವರ್ಷದ ಬಾಲಕನಾಗಿದ್ದಾಗ ನನ್ನ ತಂದೆಯೊಡನೆ ನೋಡಿದ ‘ಹಟಾರಿ’ ಎಂಬ ಚಲನಚಿತ್ರವು ನಾನು ನನ್ನ ಜೀವಮಾನದಲ್ಲಿ ಆಫ್ರಿಕಾವನ್ನು ನೋಡಲೇಬೇಕೆಂಬ ಬಯಕೆ ಹುಟ್ಟುಹಾಕಿತು. ಈ ನನ್ನ ಕನಸು ೨೦೧೪ ರ ಆಗಸ್ಟ್ ತಿಂಗಳಿನಲ್ಲಿ ನನಸಾಯಿತು.

ನನ್ನ ಮೊದಲ ಕೀನ್ಯ ಪ್ರವಾಸದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆನೆಗಳು – © ಅನಂತ ಮೂರ್ತಿ

ಕೀನ್ಯ ಪ್ರವಾಸ ನನಗೆ ತುಂಬಾ ವಿಶೇಷವೆನಿಸಲು ಕಾರಣ ಇದು ನನ್ನ ಮೊದಲ ಆಫ್ರಿಕ ಪ್ರವಾಸ, ಅಲ್ಲದೆ ನನ್ನ ಜೊತೆ ಛಾಯಾಗ್ರಾಹಕ ಗುರುಗಳಾದ ಸುರೇಶ್ ಬಸವರಾಜು ಮತ್ತು ಪಾರಂಗತ ಛಾಯಾಗ್ರಾಹಕರಾದ ಯಶ್ಪಾಲ್ ರಾತ್ಹೋರ್ ರವರು ಜೊತೆಗಿದ್ದರು.

ಆಫ್ರಿಕಾದ ಮೀನು ಹದ್ದು – © ಅನಂತ ಮೂರ್ತಿ

ಕೀನ್ಯಾದ ೯ ದಿನಗಳ ಪ್ರವಾಸ ನೈರೋಬಿಯಿಂದ ಶುರುವಾಯಿತು. ನಮ್ಮ ಮಾರ್ಗದರ್ಶಿ, ಸೈಮನ್ ಕೆ ರವರು ನಮ್ಮನ್ನು ನಯಿವಶ ಸರೋವರಕ್ಕೆ ಕರೆದೊಯ್ದರು. ಈ ಸರೋವರವು ಗ್ರೇಟ್ ರಿಫ್ಟ್ ಕಣಿವೆಯಲ್ಲಿದೆ. ನಾನು ಅತೀವ ಪಕ್ಷಿ ಪ್ರೇಮಿಯಾದ್ದರಿಂದ ಈ ಜಾಗದಲ್ಲಿ ಕಂಡ ಆಫ್ರಿಕಾದ ಮೀನು ಹದ್ದು (African fish eagle), ದೈತ್ಯ ಮಿಂಚುಳ್ಳಿ (Giant kingfisher) ಹಾಗು ಇನ್ನಿತರ ಪಕ್ಷಿಗಳು ನನ್ನ ಮನಸ್ಸನ್ನು ಉಲ್ಲಾಸಗೊಳಿಸಿದವು. ಈ ಜಾಗಕ್ಕೆ ಹೋಗುವಾಗ ನಾನು ಯಾವುದೇ ರೀತಿಯ ಅಪೇಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಆದರೆ ೩ ಗಂಟೆಗಳ ನಯಿವಶ ಸರೋವರದ ದೋಣಿ ವಿಹಾರದಲ್ಲಿ ನಮಗೆ ಹಲವಾರು ಪಕ್ಷಿಗಳು ಕಂಡವು. ಅದರಲ್ಲಿ ಮರೆಯಲಾರದ ನೆನಪುಗಳೆಂದರೆ ಸರಾಗವಾಗಿ ಮೀನು ಹಿಡಿಯುತ್ತಿದ್ದ ಆಫ್ರಿಕಾದ ಮೀನು ಹದ್ದು ಹಾಗು ಕಪ್ಪೆಯನ್ನು ಹಿಡಿದು ತಿನ್ನುತ್ತಿದ್ದ ದೈತ್ಯ ಮಿಂಚುಳ್ಳಿ.

ನಕುರು ಸರೋವರ ನಮ್ಮ ಮುಂದಿನ ತಲುಪುದಾಣ. ಈ ಸರೋವರದ ಸೌಂದರ್ಯವನ್ನು ಸವಿಯಲು ಎರಡು ಕಣ್ಣುಗಳೂ ಸಾಲದು! ಈ ಸರೋವರದ ವೈಶಿಷ್ಟ್ಯತೆ ಎಂದರೆ ಇಲ್ಲಿ ಕಾಣಬಹುದಾದ ತೀವ್ರವಾಗಿ ಅಳಿವಿನಂಚಿನಲ್ಲಿರುವ ಕಪ್ಪು ಹಾಗು ಬಿಳಿ ಖಡ್ಗಮೃಗಗಳು. ಈ ಸರೋವರದಲ್ಲಿ ಲಕ್ಷಗಟ್ಟಲೆ ಗುಲಾಬಿ ಬಣ್ಣದ ಕೊಕ್ಕರೆಗಳು (Pink Flamingo) ಹಿಂಡು ಹಿಂಡಾಗಿ ಗುಲಾಬಿ ತರಂಗಗಳನ್ನು ರೂಪಿಸುತ್ತವೆ. ಇದು ಎಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ವಿಸ್ಮಯಕಾರಿ ದೃಶ್ಯ. ಆದರೆ ದುರದೃಷ್ಟವಶಾತ್ ನಾವು ಹೋದ ಸಮಯದಲ್ಲಿ ಆ ಕೊಕ್ಕರೆಗಳು ಬೇರೆಲ್ಲಿಗೋ ವಲಸೆ ಹೊರಟು ಹೋಗಿದ್ದವು. ಸರೋವರದ ಸೌಂದರ್ಯ ಸವಿಯುತ್ತಿದ್ದ ಸಮಯದಲ್ಲೇ ಚಿರತೆಯೊಂದು ನಮ್ಮನ್ನು ಭೇಟಿಯಾಯಿತು.

ಖಡ್ಗಮೃಗ – © ಅನಂತ ಮೂರ್ತಿ
ಚಿರತೆ – © ಅನಂತ ಮೂರ್ತಿ

ನಕುರು ಲೇಕ್ ಬಿಡದಿಯ ಕೊನೆಯ ದಿನದಂದು ಅಲ್ಲಿನ ಸಿಬ್ಬಂದಿಗಳು ಆಫ್ರಿಕಾದ ಸಾಂಪ್ರದಾಯಿಕ ಉಡುಗೆ ತೊಟ್ಟು, ನಮ್ಮ ಸುತ್ತ ನಿಂತು, ಹಿಂದಿಯಲ್ಲಿ ಒಂದು ಹಾಡು ಹಾಡಿದರು. ಅವರ ಅತಿಥಿ ಸತ್ಕಾರಕ್ಕೆ ನಾವೆಲ್ಲರೂ ಮನಸೋತೆವು.

ಅಲ್ಲಿಂದ ಹೊರಟ ನಾವು, ಆಫ್ರಿಕಾದ ಅತಿ ಪ್ರಖ್ಯಾತ ಸ್ಥಳವಾದ ಮಸೈ ಮಾರಾಗೆ ಬಂದು ತಲುಪಿದೆವು. ಮಸೈ ಮಾರಾದ ಅದ್ಭುತ ಕಾಡು ಹಾಗು ಅಸಂಖ್ಯಾತ ಪ್ರಾಣಿ ಪಕ್ಷಿಗಳು ನಮ್ಮ ಮನಸೂರೆಗೊಂಡವು. ಆಫ್ರಿಕಾದ ಬಿಗ್ ೫ ಎಂದು ಕರೆಯಲ್ಪಡುವ ಆಫ್ರಿಕ ಆನೆ, ಖಡ್ಗಮೃಗ, ಆಫ್ರಿಕ ಸಿಂಹ, ಚಿರತೆ ಮತ್ತು ಆಫ್ರಿಕ ಎಮ್ಮೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇವೆಲ್ಲದುದರ ಜೊತೆಗೆ ನಾವು ನೋಡಲೇ ಬೇಕೆಂದು ಬಂದ ವೈಲ್ದೆಬೀಸ್ಟ್ (Wildebeest) ವಲಸೆಯನ್ನು ಕಣ್ತುಂಬ ವೀಕ್ಷಿಸಿದೆವು.

ಆಫ್ರಿಕಾ ಸಿಂಹ – © ಅನಂತ ಮೂರ್ತಿ
ಆಫ್ರಿಕಾ ಸಿಂಹ – © ಅನಂತ ಮೂರ್ತಿ

ಆಫ್ರಿಕಾದ ಬಿಗ್ ೫ ಮತ್ತು ಸುಂದರ ಸೂರ್ಯಾಸ್ತದ ದೃಶ್ಯ ನೋಡುತ್ತಾ ಕುಳಿತ್ತಿದ್ದ ನನಗೆ ನಾನೆಷ್ಟು ಅದೃಷ್ಟವಂತ ಎಂಬ ಅನುಭೂತಿಯಾಯಿತು. ನಾನು ಸದಾ ಮೆಲುಕು ಹಾಕುವ ಮರೆಯಲಾರದ ಕೆಲವು ನೆನಪುಗಳೆಂದರೆ ಸಿಂಹಗಳ ಮಿಲನದ ಘರ್ಜನೆ ಹಾಗು ಅತಿ ವೇಗವಾಗಿ ಓಡುತ್ತಿದ್ದ ಮಲೈಕ ಎಂಬ ಚಿರತೆ ಮತ್ತದರ ಮರಿಗಳು.

ಅಲ್ಲಿಂದ ಭಾರತಕ್ಕೆ ಹೊರಡುವ ದಿನ ನಾನು ನನ್ನ ಮನಸ್ಸಿನಲ್ಲಿ ಅಂದುಕೊಂಡೆ – ಇದು ಕೇವಲ ಆರಂಭವಷ್ಟೇ! ಅಂದಿನಿಂದ ಪ್ರತಿ ವರ್ಷ ಆಫ್ರಿಕಾಗೆ ನಾನು ನಿಯಮಿತ ಪ್ರವಾಸಿಯಾಗಿದ್ದೇನೆ.

ಅನಂತ ಮೂರ್ತಿ

ನಿಮ್ಮ ಕಾಮೆಂಟ್

Please enter your comment!
Please enter your name here