ಮಳ್ಳಿ ಮಳ್ಳಿ ಮಿಂಚುಳ್ಳಿ

0
135
ಸಾಮಾನ್ಯ ಮಿಂಚುಳ್ಳಿ © ರಾಘವೇಂದ್ರ ಪತ್ತರ್

ಮಿಂಚುಳ್ಳಿಯು ಒಂದು ಸಣ್ಣ ಹಕ್ಕಿಯಾಗಿದ್ದು, ‘ಕೋರಾಸಿಫಾರ್ಮ್ಸ್’ ಎಂಬ ಗುಂಪಿಗೆ ಸೇರಿದೆ. ಒಟ್ಟಾರೆ ಸರಿಸುಮಾರು ೯೦ ಜಾತಿಯ ಮಿಂಚುಳ್ಳಿಗಳಿವೆ. ಇವು ಹೆಚ್ಚಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇವುಗಳ ರೆಕ್ಕೆಗಳು ನೀಲಿ, ಕಿತ್ತಳೆ ಹೀಗೆ ಹಲವಾರು ಬಣ್ಣಗಳಿಂದ ಕೂಡಿರುತ್ತದೆ. ಇವುಗಳಿಗೆ ದೊಡ್ಡ ತಲೆ, ಉದ್ದನೆಯ ಚೂಪಾದ ಕೊಕ್ಕು, ಚಿಕ್ಕ ಕಾಲುಗಳು ಮತ್ತು ಗಿಡ್ಡದಾದ ಬಾಲವಿರುತ್ತದೆ.

ಇತ್ತೀಚಿನ ದಿನಗಳಲ್ಲಿ “ಸಾಮಾನ್ಯ ಮಿಂಚುಳ್ಳಿ (Common Kingfisher)” ಆಕಾಶದಿಂದ ಕಣ್ಮರೆಯಾಗುತ್ತಿರುವುದು ಒಂದು ವಿಷಾದದ ಸಂಗತಿ. ಪ್ರಖ್ಯಾತ ಛಾಯಾಗ್ರಾಹಕರಾದ ರಾಘವೇಂದ್ರ ಪತ್ತರ್ ರವರು ಈ ಮಿಂಚುಳ್ಳಿಯ ಬೆನ್ನು ಹಿಡಿದು ಹೋದ ತಮ್ಮ ಪ್ರಯಾಣವನ್ನು ಹೀಗೆ ವಿವರಿಸುತ್ತಾರೆ.

‘ನಗುವನಹಳ್ಳಿ’, ಮಂಡ್ಯ ತಾಲ್ಲೂಕಿನ, ಶ್ರೀರಂಗಪಟ್ಟಣ ನಗರದ ಸಮೀಪದಲ್ಲಿರುವ ಒಂದು ಸುಂದರವಾದ ಸ್ಥಳ, ಬೆಂಗಳೂರಿನಿಂದ ೩ ಗಂಟೆ ದೂರದಲ್ಲಿದೆ. ನಗುವನಹಳ್ಳಿ ಸುಮಾರು ೪೬ ಜಾತಿಯ ವಿಧವಿಧವಾದ ಪಕ್ಷಿಗಳಿಗೆ ಮನೆಯಾಗಿದೆ. ಬೆಳಿಗ್ಗೆ ೭:೩೦ ಕ್ಕೆ ಹೊರಟ ನನಗೆ ಸಾಮಾನ್ಯ ಮಿಂಚುಳ್ಳಿಗಳ (Common Kingfisher) ಆವಾಸಸ್ಥಾನವನ್ನು ಕಂಡು, ಅದನ್ನು ಚೆನ್ನಾಗಿ ಅರ್ಥೈಸಿಕೊಳ್ಳುವುದೇ ಪ್ರಮುಖ ಉದ್ದೇಶವಾಗಿತ್ತು.

ನಾನು ಭಾರವಾದ ಛಾಯಾಗ್ರಾಹಕ ಸಲಕರಣೆಗಳನ್ನು ಹೊತ್ತುಕೊಂಡು, ಮರೆಮಾಚುತ್ತಾ ಮೆಲ್ಲಗೆ ಕಾವೇರಿ ನದಿ ದಾಟಿದೆ. ಪಕ್ಷಿಗಳ ಆವಾಸಸ್ತಾನವನ್ನು ಯಾವುದೇ ರೀತಿ ಹಾಳು ಮಾಡದೆ ಮುನ್ನಡೆಯುವುದು ತುಂಬಾ ಮುಖ್ಯ.

ನನಗೆ ಚಿಕ್ಕಂದಿನಿಂದಲೂ ಮಿಂಚುಳ್ಳಿಯ ಬಗ್ಗೆ ಒಂದು ಬಗೆಯ ಕುತೂಹಲ. ಹಾಗಾಗಿ ಮಿಂಚುಳ್ಳಿಯನ್ನು ಚಿತ್ರೀಕರಿಸುವಲ್ಲಿ ನನಗೆ ಅತೀವ ಆಸಕ್ತಿ. ಈ ಹಕ್ಕಿಯ ಬಣ್ಣಗಳನ್ನು, ಅದರ ಅವಾಸಸ್ಥಾನದಲ್ಲಿಯೇ ಬಹಳ ಹತ್ತಿರದಿಂದ ಚಿತ್ರೀಕರಿಸುವುದು ನನ್ನ ಆಸೆಯಾಗಿತ್ತು.

ಮಿಂಚುಳ್ಳಿಯ ಛಾಯಾಗ್ರಹಣ ಶುರು ಮಾಡುವ ಮುನ್ನ ಅಲ್ಲಿನ ಭೂವಿವರಣೆ ಮತ್ತು ಪಕ್ಷಿಯ ನಡವಳಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಅವುಗಳ ಗೂಡಿನಿಂದ ಆದಷ್ಟು ದೂರದಲ್ಲಿ ನಿಲ್ಲಬೇಕು.

ನಾನು ಬಹಳ ವರ್ಷಗಳಿಂದ ಸಾಮಾನ್ಯ ಮಿಂಚುಳ್ಳಿಗಳನ್ನು ಛಾಯಾಗ್ರಹಣ ಮಾಡಲು ಕಾಯುತ್ತಿದ್ದೆ. ಸಾಮಾನ್ಯವಾಗಿ ಇವುಗಳು ಸ್ನೇಹಪರ ಹಕ್ಕಿಗಳು, ಮನುಷ್ಯರನ್ನು ಕಂಡು ದೂರಕ್ಕೆ ಹಾರಿಹೋಗುವ ಹಕ್ಕಿಗಳಲ್ಲ. ಇವುಗಳ ಹೆಸರು ‘ಸಾಮಾನ್ಯ ಮಿಂಚುಳ್ಳಿ’ ಎಂದಾಗಿದ್ದರೂ, ಇವುಗಳು ಸಾಮಾನ್ಯವಾಗಿ ಕಾಣ ಸಿಗುವ ಹಕ್ಕಿಗಳಲ್ಲ. ಒಂದೇ ಸ್ಥಳದಲ್ಲಿ ಈ ಪಕ್ಷಿಗಳು ನನಗೆ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಈ ಪಕ್ಷಿಗಳು ಹೆಚ್ಚಾಗಿ ನೀರಿನ ಮೇಲೆ ತೂಗುವ ರೆಂಬೆಗಳ ಮೇಲೆ ಅಥವಾ ನೀರಿನ ಮೇಲೆ ಸಣ್ಣ ಗಿಡಗಳ ಮೇಲೆ ಕುಳಿತುಕೊಳ್ಳುತ್ತವೆ.

ಮಿಂಚುಳ್ಳಿಗಳು ನದಿ, ಕೆರೆ, ಕೊಳಗಳ ದಡದಲ್ಲಿ ಜಲ್ಲಿ ಗುಂಡಿಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಗೂಡು ಕಟ್ಟಲು ತಮ್ಮ ಚೂಪಾದ ಕೊಕ್ಕು ಹಾಗು ಕಾಲುಗಳನ್ನು ಉಪಯೋಗಿಸುತ್ತವೆ. ಇವು ಗಂಟೆಗೆ ೨೫ ಮೈಲಿ ವೇಗದಲ್ಲಿ ಹಾರಬಲ್ಲವು ಮತ್ತು ನೀರಿನಲ್ಲಿ ೨ ಅಡಿ ಕೆಳಗಿನಿಂದ ಮೀನು ಹಿಡಿಯಬಲ್ಲವು.

ಮಿಂಚುಳ್ಳಿಗಳು ಅವುಗಳ ಮೊದಲ ವರ್ಷದಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ. ಫೆಬ್ರವರಿ ತಿಂಗಳಿನಲ್ಲಿ ಅವುಗಳ ಜೋಡಿಯಾಗುವಿಕೆ ಪ್ರಾರಂಭವಾಗುತ್ತದೆ. ಹೆಣ್ಣು ಮತ್ತು ಗಂಡು ಮಿಂಚುಳ್ಳಿಗಳು ಅಕ್ಕ ಪಕ್ಕದ ಕ್ಷೇತ್ರಗಳಲ್ಲಿದ್ದರೆ, ಅವುಗಳು ಜೋಡಿಯಾಗಿ ತಳಿವರ್ಧನೆಗೆ ಸಿದ್ಧವಾಗುತ್ತವೆ. ಎರಡು ಹಕ್ಕಿಗಳು ಹೊಳೆ ದಡದಲ್ಲಿ ಮರಳು ರಹಿತ ಮಣ್ಣನ್ನು ಉತ್ಖನನ ಮಾಡಿ ಬಿಲ ತೋಡಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಹೆಚ್ಚು ಸಸ್ಯ ರಾಶಿ ಇಲ್ಲದ ದಡ ಆಯ್ಕೆ ಮಾಡಿಕೊಳ್ಳುತ್ತವೆ, ಇದರಿಂದಾಗಿ ಪರಭಕ್ಷಕರಿಂದ ಮೊಟ್ಟೆ ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ. ಬಿಲದ ಉದ್ದ ೬೦-೯೦ ಸೆ.ಮೀ ಹಾಗು ೬ ಸೆ.ಮೀ ಅಗಲವಿರುತ್ತದೆ.

ಬಿಲದ ಕೊನೆಯಲ್ಲಿ ಒಂದು ಹಳ್ಳವನ್ನು ಮಾಡಿ, ಮೊಟ್ಟೆಗಳು ಉರುಳಿ ಹೋಗದಂತೆ ಕಾಪಾಡಿಕೊಳ್ಳುತ್ತವೆ. ಈ ಬಿಲದೊಳಗೆ ಯಾವುದೇ ಸಾಮಗ್ರಿ ಈ ಹಕ್ಕಿಗಳು ತರುವುದಿಲ್ಲ. ೨ – ೩ ಮರಿಗಳನ್ನು ಈ ಬಿಲದಲ್ಲಿಯೇ ಬೆಳೆಸಲಾಗುತ್ತದೆ. ಮೊದಲ ೬ – ೭ ಮೊಟ್ಟೆಗಳನ್ನು ಏಪ್ರಿಲ್ ತಿಂಗಳಿನಲ್ಲಿ ಇಡುತ್ತವೆ. ಮೊಟ್ಟೆಗಳಿಗೆ ಹೆಣ್ಣು ಮತ್ತು ಗಂಡು ಮಿಂಚುಳ್ಳಿಗಳೆರಡೂ ಕಾವು ಕೊಡುತ್ತವೆ. ೧೯ – ೨೧ ದಿನಗಳ ನಂತರ ಈ ಮೊಟ್ಟೆಗಳು ಒಡೆದು ಮರಿಯಾಗುತ್ತವೆ. ಒಂದು ಮರಿ ದಿನವೊಂದಕ್ಕೆ ೧೨ – ೧೮ ಮೀನುಗಳನ್ನು ತಿನ್ನಬಲ್ಲವು, ಪೋಷಕ ಹಕ್ಕಿಗಳು ಸರತಿ ಸಾಲಿನಲ್ಲಿ ಮರಿಗಳಿಗೆ ಉಣಬಡಿಸುತ್ತವೆ.

೨೪ – ೨೫ ದಿನಗಳಾದ ನಂತರ ಈ ಮರಿಗಳು ಗೂಡಿನಿಂದ ಹಾರಲು ಸಿದ್ಧವಾಗುತ್ತವೆ. ಆಹಾರ ಕಡಿಮೆಯಾದ ಮರಿಗಳಿಗೆ ಹಾರಲು ೩೭ ದಿನಗಳು ಬೇಕು.

ವೇಗವಾಗಿ ಹರಿಯುವ ಹೊಳೆ ಮತ್ತು ಅಶುದ್ಧ ನೀರಿನಲ್ಲಿ ಮೀನುಗಳು ಇರದ ಕಾರಣ, ಅಂತಹ ಕಡೆ ಮಿಂಚುಳ್ಳಿಗಳು ಕಾಣಸಿಗುವುದಿಲ್ಲ. ಮಿಂಚುಳ್ಳಿಗಳು ಹೆಚ್ಚಾಗಿ ಮಿನ್ನೋವ್ (Minnow) ಮತ್ತು ಸ್ಟೀಕಲ್ ಬ್ಯಾಕ್ (Stickleback) ಜಾತಿಯ ಮೀನುಗಳನ್ನು ತಿನ್ನುತ್ತವೆ. ಅಷ್ಟೇ ಅಲ್ಲದೆ ನೀರಿನಲ್ಲಿರುವ ಕ್ರಿಮಿ ಕೀಟಗಳು ಮತ್ತು ಕಪ್ಪೆ ಮರಿಗಳನ್ನು ತಿನ್ನುತ್ತವೆ. ಇವು ಸಾಮಾನ್ಯವಾಗಿ ೨೩ ಮಿ.ಮೀ ಉದ್ದದ ಮೀನುಗಳನ್ನು ಆಯ್ದುಕೊಳ್ಳುತ್ತವೆ. ಆದರೆ ಇವುಗಳು ೮೦ ಮಿ.ಮೀ ಉದ್ದದ ಮೀನುಗಳನ್ನು ಹಿಡಿದು ತಿನ್ನಬಲ್ಲವು.’

ಸಾಮಾನ್ಯ ಮಿಂಚುಳ್ಳಿ © ರಾಘವೇಂದ್ರ ಪತ್ತರ್

ನೀರಿನ ಮೇಲೆ ತೂಗುವ ರೆಂಬೆಗಳ ಮೇಲೆ ಕುಳಿತು ಮೀನುಗಳನ್ನು ಹಿಡಿಯುತ್ತವೆ. ಮಿಂಚುಳ್ಳಿಯು ಒಂದು ಮೀನನ್ನು ಗುರುತಿಸಿದ ತಕ್ಷಣ, ಅದರ ಆಳವನ್ನು ಅಳೆದು ನೀರಿನ ಒಳಗೆ ಜಿಗಿಯುತ್ತದೆ. ನೀರನ್ನು ಪ್ರವೇಶ ಮಾಡುವಾಗ ಅದರ ಕೊಕ್ಕು ತೆರೆದಿದ್ದು, ಅದರ ಕಣ್ಣು ರೆಪ್ಪೆಯಿಂದ ಮುಚ್ಚಿರುತ್ತವೆ. ಹೀಗಾಗಿ ಮಿಂಚುಳ್ಳಿ ಮೀನು ಹಿಡಿಯುವಾಗ ವಾಸ್ತವವಾಗಿ ಕುರುಡಾಗಿರುತ್ತದೆ. ಮೀನನ್ನು ರೆಂಬೆಯ ಮೇಲೆ ತಂದು ಅದನ್ನು ಪದೇ ಪದೇ ಕೊಂಬೆಗೆ ಹೊಡೆದು ನಂತರ ಅದನ್ನು ತಿನ್ನುತ್ತದೆ. ಒಂದು ಮಿಂಚುಳ್ಳಿಯು ದಿನವೊಂದಕ್ಕೆ ತನ್ನ ದೇಹದ ತೂಕದಷ್ಟು ಆಹಾರ ಸೇವಿಸುತ್ತದೆ.

ಮಿಂಚುಳ್ಳಿಗಳು ಕ್ಷೇತ್ರೀಯ ಪಕ್ಷಿಗಳು. ಸಾಕಷ್ಟು ಆಹಾರದೊಂದಿಗೆ ತನ್ನ ಕ್ಷೇತ್ರವನ್ನು ರಕ್ಷಿಸಿಕೊಳ್ಳಲಾಗದ ಮಿಂಚುಳ್ಳಿ ಸಾವನ್ನಪ್ಪುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಪಕ್ಷಿಗಳು ಕ್ಷೇತ್ರಕ್ಕಾಗಿ ಹೊಡೆದಾಟ ನಡೆಸುತ್ತವೆ. ಚಳಿಗಾಲ ಶುರುವಾಗುವ ಮುನ್ನ ಕ್ಷೇತ್ರಗಳನ್ನು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ, ಒಮ್ಮೊಮ್ಮೆ ಚಳಿ ಹೆಚ್ಚಾದಾಗ ತನ್ನ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ, ಅಲ್ಲಿ ಸಮರಗಳು ನಡೆಯುವುದುಂಟು.

ಸಾಮಾನ್ಯ ಮಿಂಚುಳ್ಳಿ © ರಾಘವೇಂದ್ರ ಪತ್ತರ್

ಮಿಂಚುಳ್ಳಿಯ ಕ್ಷೇತ್ರದ ಉದ್ದಗಲ, ಅಲ್ಲಿ ಲಭ್ಯವಿರುವ ಆಹಾರ ಹಾಗು ಅಲ್ಲಿನ ಪಕ್ಷಿ ಗಣತಿಯ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಇವುಗಳ ಕ್ಷೇತ್ರ ೧ ಕಿಮೀ ನಷ್ಟು ನದಿ ಅಥವಾ ಕೆರೆಯನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ೩ – ೫ ಕಿಮೀ ವರೆಗೂ ಇವುಗಳ ಕ್ಷೇತ್ರ ವಿಸ್ತರಿಸಿರುತ್ತದೆ, ಅಕ್ಕ ಪಕ್ಕದಲ್ಲಿರುವ ಸಣ್ಣ ಪುಟ್ಟ ನೀರಿನ ಮೂಲಗಳನ್ನು ಅದು ಒಳಗೊಂಡಿರುತ್ತದೆ.

ಮಿಂಚುಳ್ಳಿಗಳು ಅಲ್ಪಾಯುಷಿಗಳು. ಬಹಳಷ್ಟು ಮಿಂಚುಳ್ಳಿಗಳು ತಮ್ಮ ಪೋಷಕರ ಕ್ಷೇತ್ರದಿಂದ ಹೊರ ಬರುವ ಮುನ್ನ ಮೀನು ಹಿಡಿಯುವ ಕಲೆಯನ್ನು ಕಲಿತಿರುವುದಿಲ್ಲ. ಮೊಟ್ಟೆಯಿಂದ ಹೊರಬಂದ ಮರಿಗಳಲ್ಲಿ ಕೇವಲ ಅರ್ಧದಷ್ಟು ಮರಿಗಳು ಮಾತ್ರ ಬದುಕುಳಿಯುತ್ತವೆ. ಮತ್ತೆ ಹಲವಾರು ಮಿಂಚುಳ್ಳಿಗಳು ಅತಿಯಾದ ಚಳಿ ಅಥವಾ ಬಿಸಿಲಿನಿಂದಲೂ ಸಾವನ್ನಪ್ಪುತ್ತವೆ.

ಮಿಂಚುಳ್ಳಿಯು ಆಹಾರ ಸರಪಳಿಯಲ್ಲಿ ಅಗ್ರ ಸ್ಥಾನದಲ್ಲಿದೆ, ಹೀಗಾಗಿ ರಾಸಾಯನಿಕಗಳ ಬಳಕೆಯಿಂದ ಅತಿ ಹೆಚ್ಚು ಹಾನಿ ಅನುಭವಿಸುತ್ತಿದೆ. ಪರಿಸರ ಮಾಲಿನ್ಯ ಮತ್ತು ಮಿತಿಮೀರಿದ ಕೃಷಿಯಿಂದ ನೀರಿನ ಮೂಲಗಳು ಮಲಿನಗೊಂಡು, ಹೆಚ್ಚು ಹೆಚ್ಚು ಮೀನುಗಳು ಸಾವನ್ನಪ್ಪುತ್ತಿವೆ, ಹೀಗಾಗಿ ಮಿಂಚುಳ್ಳಿಯಂತಹ ಪಕ್ಷಿಗಳು ಆಹಾರವಿಲ್ಲದೆ, ನೆಲೆಯಿಲ್ಲದೆ ಪರದಾಡುವಂತಾಗಿದೆ. ಮಿಂಚುಳ್ಳಿ ಗಣತಿಯಲ್ಲಿ ೧೯೭೦ರಿಂದ ಕಂಡುಬರುತ್ತಿರುವ ಕುಸಿತಕ್ಕೆ ಮುಖ್ಯ ಕಾರಣ ನದಿಗಳ ಮಾಲಿನ್ಯ.

ಮಾನವನು ಉಂಟು ಮಾಡುತ್ತಿರುವ ಅಡಚಣೆಗಳಿಂದ ಮಿಂಚುಳ್ಳಿಗಳ ಸಂಸಾರಗಳು ಆವಾಸಸ್ಥಾನವಿಲ್ಲದೆ ಅಸುನೀಗುತ್ತಿವೆ. ಈ ಪಕ್ಷಿಗಳು ನಾಚಿಕೆ ಸ್ವಭಾವದ್ದಾದ್ದರಿಂದ, ಹಲವಾರು ಕಡೆ ಗೂಡಿನ ಬಳಿಯಲ್ಲಿ ಮನುಷ್ಯನ ಉಪಸ್ಥಿತಿಯಿಂದ ಅವು ಬಹಳಷ್ಟು ದಿನ ಗೂಡಿಗೆ ತೆರಳದಂತಾಗಿ ಮರಿ ಮಿಂಚುಳ್ಳಿಗಳು ಅಸುನೀಗುತ್ತಿವೆ.

ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ಈ ಸುಂದರ ಹಕ್ಕಿಗಳ ಬೆಳವಣಿಗೆಗೆ ಸಹಕರಿಸೋಣ.

ರಾಘವೇಂದ್ರ ಪತ್ತರ್

ಮೂಲ ಬರಹ ರಾಘವೇಂದ್ರ ಪತ್ತರ್ , ಕನ್ನಡ ಅನುವಾದ ಕಾಡುನಾಡು ತಂಡ.

ನಿಮ್ಮ ಕಾಮೆಂಟ್

Please enter your comment!
Please enter your name here