ಕುರಿಂಜಲ್ ಚಾರಣ

0
660

ನೀವು ಬೆಂಗಳೂರಿನ ವೇಗದ ಜನಜೀವನ ಹಾಗು ಟ್ರಾಫಿಕ್ ಜಂಜಾಟದಿಂದ ವಾರಂತ್ಯದಲ್ಲಿ ಪಾರಗಬೇಕೆಂದಿದ್ದೀರಾ?

ಹಾಗಿದ್ದಲ್ಲಿ  ಕುದುರೆಮುಖ ರಾಷ್ಟೀಯ ಉದ್ಯಾನವನದಲ್ಲಿರುವ ಕುರಿಂಜಲ್ ಶಿಖರ ನಿಮಗೆ ಹೇಳಿ ಮಾಡಿಸಿದ ಸ್ಥಳ. ಕುರಿಂಜಲ್ ಶಿಖರವು ಪಶ್ಚಿಮ ಘಟ್ಟಗಳ ಶ್ರೇಣಿಗೆ ಸೇರಿದ್ದು, ಉಷ್ಣವಲಯದ ಕಾಡುಗಳಿಂದ ಕೂಡಿದೆ. ಈ ಶಿಖರವು ಭೂದೃಶ್ಯದ ಸೌಂದರ್ಯತೆ, ಝುಳು ಝುಳು ಹರಿಯುವ ಝರಿಗಳು ಹಾಗು ವಿಭಿನ್ನ ಪ್ರಾಣಿ ಪಕ್ಷಿಗಳಿಂದ ಕೂಡಿದ್ದು ಎಲ್ಲರ ಕಣ್ಮನ ಸೆಳೆಯುತ್ತದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದು. ಇದು ಬೆಂಗಳೂರಿನಿಂದ ಸುಮಾರು ೩೦೦ ಕಿಮೀ ದೂರದಲ್ಲಿದೆ. ಮುಳ್ಳಯ್ಯನಗಿರಿ ಮತ್ತು ಬಾಬಾಬುಡನಗಿರಿ ಬೆಟ್ಟಗಳ ನಂತರ ಅತಿ ಎತ್ತರದ ಶಿಖರ ಈ ಕುದುರೆಮುಖ. ಕುರಿಂಜಲ್ ಶಿಖರದ ಉತ್ತುಂಗವನ್ನು ತಲುಪಲು ೭ ಕಿಮೀಗಳಷ್ಟು ಚಾರಣ ಮಾಡಬೇಕು.

ಕುರಿಂಜಲ್ ಚಾರಣದ ತಮ್ಮ ಅನುಭವವನ್ನು ಸುನಿಲ್ ಸಾಚಿರವರು ಕೆಳಕಂಡಂತೆ ವಿವರಿಸುತ್ತಾರೆ.

ನಾನು, ನನ್ನ ತಂಡ ಶುಕ್ರವಾರ ರಾತ್ರಿ ೭ ಗಂಟೆ ಹೊತ್ತಿಗೆ ಕುದುರೆಮುಖದತ್ತ ಪ್ರಯಾಣ ಬೆಳೆಸಿದೆವು. ಈ ಬಾರಿ ನಮ್ಮ ತಂಡದಲ್ಲಿ ಐ ಟಿ ಉದ್ಯಮಿಗಳು, ವೈದ್ಯರು, ವಕೀಲರು,ವಿದ್ಯಾರ್ಥಿಗಳು ಹಾಗು ವ್ಯಾಪಾರಿಗಳಿದ್ದರು. ನಮ್ಮೆಲ್ಲರ ನಡುವೆ ೧೦ ವರ್ಷದ ಸಣ್ಣ ಹುಡುಗನಿದ್ದ.

© ಸುನಿಲ್ ಸಾಚಿ

ಶನಿವಾರ ಬೆಳಿಗ್ಗೆ ೮ ಗಂಟೆಗೆ ನಾವು ಕುದುರೆಮುಖದ ಬಲ್ಗಾಲ್ ಸ್ಟಾಪ್ ತಲುಪಿದೆವು. ಅಲ್ಲಿಂದ ಜೀಪ್ ಮುಖಾಂತರ ೭ ಕಿಮೀ ಪ್ರಯಾಣಿಸಿದರೆ ಮುಲ್ಲೋಡಿ ಗ್ರಾಮದಲ್ಲಿರುವ ನಮ್ಮ ಮೂಲ ಶಿಬಿರವನ್ನು ತಲುಪಬಹುದು. ಈ ಗ್ರಾಮದಲ್ಲಿ ಉಳಿದುಕೊಳ್ಳಲು ಒಂದೆರಡು ಹೋಂಸ್ಟೇಗಳು ಲಭ್ಯವಿದೆ.

ನಾವು ಬಲ್ಗಾಲ್ ಸ್ಟಾಪ್ನಲ್ಲಿಯೇ ನಿತ್ಯಕರ್ಮಗಳನ್ನು ಮುಗಿಸಿ, ಸತೀಶ್ ಅವರು ತಂದ ಬಿಸಿ ಬಿಸಿ ಇಡ್ಲಿ ಸಾಂಬಾರ್ ತಿಂದು, ಮಧ್ಯಾಹ್ನಕ್ಕೆ ಊಟದ ಪೊಟ್ಟಣ ಕಟ್ಟಿಕೊಂಡು, ಕುದುರೆಮುಖ ಅರಣ್ಯಾಧಿಕಾರಿ ಕಛೇರಿಗೆ ಅಗತ್ಯವಾದ ಅನುಮತಿಯನ್ನು ಪಡೆಯಲು ಹೊರಟೆವು.

ನಮ್ಮ ಮಾರ್ಗದರ್ಶಿಯಾದ ಮಂಜುನಾಥ್ ಅವರು ತಾವು ಸ್ವಲ್ಪ ಹೊತ್ತಿನ ಮುಂಚೆ ಕಂಡ ಕಾಡು ನಾಯಿಗಳ ಹಿಂಡಿನ ಬಗ್ಗೆ ಹೇಳಿದಾಗ, ನಮ್ಮೆಲ್ಲರ ಉತ್ಸಾಹವು ದ್ವಿಪ್ಪಟ್ಟಾಯಿತು. ಅರಣ್ಯಾಧಿಕಾರಿ ಕಛೇರಿಯಿಂದ ಹೊರಟ ನಾವು ಹತ್ತಿರದಲ್ಲೇ ಇದ್ದ ಒಂದು ಸೇತುವೆಯ ಬಳಿ ನಿಂತೆವು. ಅಲ್ಲಿ ಭದ್ರಾ ನದಿಯ ಉಪನದಿಗಳು ಹಾಗು ಪ್ರಕೃತಿ ಸೊಬಗನ್ನು ನೋಡುತ್ತಾ ಆನಂದಿಸಿದೆವು. ಭಗವತಿ ನೇಚರ್ ಕ್ಯಾಂಪ್ ಬಳಿ ನಮ್ಮ ವಾಹನವನ್ನು ನಿಲ್ಲಿಸಿ, ಅಲ್ಲಿಂದ ಚಾರಣವನ್ನು ಕೈಗೊಂಡೆವು.

© ಸುನಿಲ್ ಸಾಚಿ

 

ಚಾರಣ ಶುರು ಮಾಡುತ್ತಿದ್ದಂತೆಯೇ ಮಳೆ ಹನಿಯಲಾರಂಭಿಸಿತು. ಕೆಲವರು ಮಳೆಯಂಗಿ ಹುಡುಕುತ್ತಿದ್ದರೆ, ಇನ್ನೂ ಕೆಲವರು ಜಿಗಣೆಯಿಂದ ಪಾರಾಗಲೆತ್ನಿಸುತ್ತಿದ್ದರು. ನಾನು ಮೊದಲೇ ಎಲ್ಲರಿಗೂ ಜಿಗಣೆಯಿಂದ ಪಾರಾಗಲು ಔಷಧಿಯ ಬದಲು ಉಪ್ಪನ್ನು ಮಾತ್ರ ಬಳಸಬೇಕೆಂದು ಕಟ್ಟು ನಿಟ್ಟಾದ ಎಚ್ಚರಿಕೆ ನೀಡಿದ್ದೆ. ನನಗೆ ಜಿಗಣೆಯ ಭಯವಿಲ್ಲದುದರಿಂದ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.

ಸ್ವಲ್ಪ ದೂರ ನಡೆದು ಒಂದು ಸೇತುವೆ ದಾಟಿದ ನಂತರ ಸಾಂಬಾರ್ ಜಿಂಕೆಯ ದರ್ಶನವಾಯಿತು. ಎಲ್ಲರೂ ತಕ್ಷಣ ಜಿಂಕೆಯ ಛಾಯಾಚಿತ್ರಗಳನ್ನು ತೆಗೆಯಲಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಜಿಂಕೆಯು ಕಾಡಿನಲ್ಲಿ ಮರೆಯಾಯಿತು. ನಂತರ ನಾವೆಲ್ಲರೂ ಅಲ್ಲಿಯೇ ನಿಂತು ಒಬ್ಬರನೊಬ್ಬರು ಪರಿಚಯ ಮಾಡಿಕೊಂಡೆವು. ಅಂದು ಅಲ್ಲಿ ಬಂದವರೆಲ್ಲಾ ಪ್ರಕೃತಿ ಪ್ರೇಮಿಗಳೇ ಆಗಿದ್ದರು.

© ಸುನಿಲ್ ಸಾಚಿ
© ಸುನಿಲ್ ಸಾಚಿ

ಹೀಗೇ ಮುಂದೆ ಸಾಗುತ್ತಿರುವಾಗ ಅಲ್ಲಲ್ಲಿ ಝರಿಗಳು ಹಾಗು ತುಂಬಾ ಎತ್ತರದ ಮರಗಳನ್ನು ಕಾಣಬಹುದು. ಈ ಉದ್ದುದ್ದ ಮರಗಳು ಮೇಲಾವರಣದ ಅನುಭೂತಿಯನ್ನು ನೀಡುತ್ತವೆ. ಈ ಕಾಡಿನಲ್ಲಿ ಲಂಗೂರ್, ವನವೃಷಭ (Gaur), ಹುಲಿ ಮತ್ತು ಅನೇಕ ಬಗೆಯ ಪಕ್ಷಿಗಳಿದ್ದು, ಅವುಗಳ ಕೂಗು ನಮಗೆ ಅರಣ್ಯದ ಉಗ್ರತೆಯನ್ನು ಪರಿಚಯಿಸುತ್ತದೆ.

ಉತ್ತುಂಗವನ್ನು ತಲುಪುವ ಕೊನೆಯ ೩೦೦ ಮೀಗಳ ಮಾರ್ಗವು ಬಹಳ ಆಕರ್ಷಣೀಯವಾದುದು. ಕೊನೆಯಲ್ಲಿ ಸುಮಾರು ೬೦ ಡಿಗ್ರಿ ಬಾಗಿರುವ ಕಲ್ಲು ಬಂಡೆಗಳನ್ನೇರಿ ಉತ್ತುಂಗ ತಲುಪಬೇಕು. ನಾವು ಶಿಖರದ ತುದಿಯನ್ನು ತಲುಪಿದಾಗ ಮೋಡಗಳು ನಮ್ಮನ್ನು ಸುತ್ತಲೂ ಆವರಿಸಿಕೊಂಡು, ನಾವು ಆಕಾಶದಲ್ಲಿಯೇ ನಿಂತಿದ್ದೇವೆ ಎನ್ನುವಂತಹ ಭಾವನೆ ಉಂಟಾಗುತ್ತದೆ.

ಶಾಹೀನ್ ಗಿಡುಗ – © ಸುನಿಲ್ ಸಾಚಿ
© ಸುನಿಲ್ ಸಾಚಿ

ಈಗ ಎಲ್ಲರಿಗೂ ಸೆಲ್ಫಿ ಸಮಯ. ರಾಕ್ ಆರ್ಕಿಡ್ಗಳು ಮತ್ತು ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುತ್ತಿದ್ದಾಗ ಶಾಹೀನ್ ಗಿಡುಗ ಪಕ್ಷಿಯ ದರ್ಶನವಾಯಿತು. ಶಾಹೀನ್ ಗಿಡುಗವು ವಿಶ್ವದಲ್ಲಿಯೇ ಅತೀ ವೇಗವಾಗಿ ಹಾರಬಲ್ಲ ಪಕ್ಷಿಯಾಗಿದೆ. ಇದು ಬೇಟೆಯಾಡುವ ಸಮಯದಲ್ಲಿ ಪ್ರತಿ ಗಂಟೆಗೆ ೩೨೦ ಕಿಮೀ ವೇಗದಲ್ಲಿ ಹಾರಬಲ್ಲದು.

ಹಪ್ಪಾಟೆ ಹಾವು – © ಸುನಿಲ್ ಸಾಚಿ

ಅಲ್ಲಿಯೇ ಪ್ರಕೃತಿಯ ಮಡಿಲಿನಲ್ಲಿ ಕುಳಿತು ನಾವು ಮಧ್ಯಾಹ್ನದ ಊಟವನ್ನುಮುಗಿಸಿ, ಕೆಳಗೆ ಇಳಿಯಲಾರಂಭಿಸಿದೆವು. ಇಷ್ಟು ಹೊತ್ತಾದರೂ ನನ್ನ ನೆಚ್ಚಿನ ಹಾವುಗಳು ಇನ್ನೂ ನೋಡಲು ಸಿಕ್ಕಿರಲಿಲ್ಲ. ನಾನು ಮತ್ತು ಕಿರಣ್ ಹಾವುಗಳನ್ನು ಹುಡುಕುತ್ತಾ ಹೊರಟೆವು. ಅದೃಷ್ಟವಶಾತ್ ನಮಗೆ ಒಂದು ಹಪ್ಪಾಟೆ ಹಾವು ಕಲ್ಲು ಬಂಡೆಗಳ ಮೇಲಿರುವುದು ಕಣ್ಣಿಗೆ ಬಿತ್ತು. ಹಪ್ಪಾಟೆ ಹಾವು ಒಂದು ಬಗೆಯ ವರ್ಚಸ್ವಿ ಹಾವಾಗಿದ್ದು, ೭ ರಿಂದ ೮ ಬಗೆಯ ಬಣ್ಣಗಳಲ್ಲಿ ನಾವಿದನ್ನು ಕಾಣಬಹುದಾಗಿದೆ. ಇವುಗಳು ಪಶ್ಚಿಮ ಘಟ್ಟಗಳಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗುವುದಿಲ್ಲ.

ಹಪ್ಪಾಟೆ ಹಾವನ್ನು ಛಾಯಾಚಿತ್ರಗಳಲ್ಲಿ ಸೆರೆ ಹಿಡಿದ ನಂತರ ನಾನು ಮತ್ತು  ಕಿರಣ್ ತಪ್ಪು ದಾರಿ ಹಿಡಿದು ಬಂದಿದ್ದೇವೆ ಎಂದು ಅರಿವಾಯಿತು. ಅಷ್ಟೊತ್ತಿಗಾಗಲೇ ಸಮಯ ಸಂಜೆಯ ೫.೪೫ ಆಗಿತ್ತು. ತಕ್ಷಣ ನಾವು ಅಲ್ಲಿಂದ ಹೊರಟು ನಮಗಾಗಿ ಕಾಯುತ್ತಿದ್ದ ನಮ್ಮ ತಂಡವನ್ನು ಸೇರಿದೆವು. ಆಗಲೇ ಕತ್ತಲಾಗುತ್ತಾ ಬಂದಿತ್ತು. ರಾತ್ರಿ ೭.೩೦ ಸಮಯದಲ್ಲಿ ಕದಂಬಿ ಜಲಪಾತದ ಒಂದು ನೋಟವನ್ನು ಸೆರೆಹಿಡಿದು, ಮೂಲ ಶಿಬಿರದತ್ತ ಪ್ರಯಾಣ ಬೆಳೆಸಿದೆವು. ನಾವೆಲ್ಲರೂ ಹಸಿವಿನಿಂದ, ದಣಿವಿನಿಂದ ಕುಂದಿದ್ದೆವು. ಬಿಸಿ ನೀರಿನ ಸ್ನಾನವನ್ನು ಮಾಡಿ, ಒಳ್ಳೆಯ ಊಟ ಮಾಡಿ ಅಂದಿನ ದಿನವನ್ನು ಮುಗಿಸಿದೆವು.

ಮಾರನೇ ದಿನ ಎಲ್ಲರೂ ಸೋಮವತಿ ಜಲಪಾತದಲ್ಲಿ ಆಟವಾಡಿ, ನಂತರ ಮೂಡಿಗೆರೆಯಲ್ಲಿರುವ ನಮ್ಮ ಮನೆ ತಲುಪಿದೆವು. ೧೦೦ ವರ್ಷ ಹಳೆಯ ಮನೆಯನ್ನು ಎಲ್ಲರೂ ಆನಂದಿಸಿ, ಕಾಫಿ ತೋಟದಲ್ಲಿ ತಿರುಗಾಡಿ, ಹಲಸಿನ ಹಣ್ಣನ್ನು ತಿಂದು, ಬೆಂಗಳೂರಿನತ್ತ ಹೊರಟೆವು.

ನನ್ನ ಅನುಭವದಲ್ಲಿ ಕುರಿಂಜಲ್ ಬೆಟ್ಟವು ಅತ್ಯಂತ ಮನೋಹರವಾದ ಸ್ಥಳ, ವಾರಾಂತ್ಯದಲ್ಲಿ ಪ್ರಕೃತಿಯ ಸೊಬಗನ್ನು ಸವಿಯಲು ಸೂಕ್ತವಾದ ಜಾಗ.

ನಿಮ್ಮ ಗಮನಕ್ಕೆ – ಇಲ್ಲಿ ಯಾವುದೇ ರೀತಿಯ ದೂರವಾಣಿ ಸಂಪರ್ಕಗಳು ಇರುವುದಿಲ್ಲ. ಕೇವಲ ನೀವು ಹಾಗು ಪ್ರಕೃತಿಯಷ್ಟೇ !

© ಸುನಿಲ್ ಸಾಚಿ
© ಸುನಿಲ್ ಸಾಚಿ

 

ಸುನಿಲ್ ಸಾಚಿ

ನಿಮ್ಮ ಕಾಮೆಂಟ್

Please enter your comment!
Please enter your name here