ಸಂಚಿಕೆ ೨ – ಕವನಗಳು – ಮಳೆ – ದೀಪ ರಾವ್

0
388

ಓ ಮಳೆಯೇ ನೀ ಬಂದರೆ
ನನ್ನ ಕಂಠ ಶುದ್ಧವಾಯಿತೆಂಬ ಭಾವನೆ,
ನೀ ತಂಪಾದ ಗಾಳಿಯ ತಂದರೆ
ನನ್ನ ಮನಸ್ಸು ಹಗುರವಾಯಿತೆಂಬ ಕಲ್ಪನೆ,
ನೀ ಹೀಗೇ ಸುರಿದು ಜಗತ್ತಿನ ಕೊಳೆಯನ್ನೆಲ್ಲಾ
ತೊಳೆಯುತ್ತಿಯೇನೋ ಎಂಬ ಆಶಾಭಾವನೆ

ಹಸಿರನ್ನು ನಗುವಂತೆ ಮಾಡುವೆ ನೀನು,
ನನ್ನನ್ನು ಹಾಡುವಂತೆ ಪ್ರೆರೇಪಿಸುವೆ ನೀನು,
ರೈತನು ನಿನ್ನನ್ನು ಕಾಯುವಂತೆ ಮಾಡುವೆ ನೀನು,
ಆದರೇಕೆ ಒಮ್ಮೊಮ್ಮೆ ಕೋಪಗೊಂಡು
ಜೀವರಾಶಿಯನ್ನೇ ನಾಶಪಡಿಸುವೆ ನೀನು?
ಒಮ್ಮೆ ಮಿತ್ರನಾಗಿ ಬಂದವನು
ಮತ್ತೊಮ್ಮೆ ಹಿತಶತ್ರುವಾಗಿ ತೋರುವೆಯಲ್ಲಾ ನೀನು?

ಹೂವುಗಳ ಪ್ರಿಯಕರನು ನೀನು,
ಎಂದು ನಂಬಿರುವವಳು ನಾನು,
ಪ್ರಾಣ ಉಳಿಯಲು ಸಂಜೀವಿನಿ ನೀನು,
ಆದರೆ ನನ್ನನ್ನು ಕಾಡುತ್ತಿರುವ ಪ್ರಶ್ನೆ ಏನು ಎಂದರೆ
ಒಮ್ಮೆ ಭೋರ್ಗರೆದು, ಮತ್ತೊಮ್ಮೆ
ತುಂತುರು ಹನಿಯಾಗಿ ಭೂಮಿಗೆ ಇಳಿವ ನೀನು,
ಮಾನವರ ಸ್ವಾರ್ಥ ಬುದ್ಧಿಯನ್ನು
ಶುದ್ಧಗೊಳಿಸಬಾರದೇಕೆ ನೀನು ?

 – ದೀಪ ರಾವ್

ನಿಮ್ಮ ಕಾಮೆಂಟ್

Please enter your comment!
Please enter your name here