ಕಾರ್ಬೆಟ್ ಅರಣ್ಯ ಪರ್ವ

0
1267
ಆನೆ – © ಸುಧೀಂದ್ರ ರಾವ್

ಸುಪ್ರಸಿದ್ಧ ಛಾಯಾಗ್ರಾಹಕರಾದ ಸುಧೀರ್ ಶಿವರಾಂರವರ ಮಾರ್ಗದರ್ಶನದ ಆಕಾಂಕ್ಷಿಯಾಗಿ ನನ್ನದೊಂದು ವಿಸ್ಮಯ ಪಯಣ ಬೆಂಗಳೂರಿನಿಂದ ಮೊದಲಾಗಿತ್ತು. ಬೆಂಗಳೂರಿನಿಂದ ಕಾರ್ಬೆಟ್ಗೆ ಏಕಾಂಗಿಯಾಗಿ ಪಯಣಿಸಬೇಕಾಗಬಹುದೆಂದು ನಾನು ಊಹಿಸಿರಲಿಲ್ಲ.  ಮುಂದಿನದು ಬೇರೇನೂ ತೋಚದಂತೆ,  ವಿಮಾನದ ಕಿಟಕಿಯಿಂದ ಹೊರಗೆಇಣುಕಿದಾಗ ಕಂಡ ವಿಶಾಲ ನೀಲ ಗಗನದಂತೆ ನನ್ನ ಮನವೂ ಬರಿದಾಗಿತ್ತು.

ನವದೆಹಲಿ ಮುಟ್ಟಿದಾಗ ಮಧ್ಯಾಹ್ನ ೧೨ ಗಂಟೆ. ವಿಮಾನ ನಿಲ್ದಾಣದಲ್ಲಿಯೇ ಊಟ ಮುಗಿಸಿ, ಟ್ಯಾಕ್ಸಿಯೇರಿ ಹಳೆದೆಹಲಿ ರೈಲ್ವೇನಿಲ್ದಾಣದ ಹಾದಿ ಹಿಡಿದಿದ್ದೆ. ಸಂಜೆ ನಾಲ್ಕಕ್ಕೆ ರಾಮ್ ನಗರದ ರೈಲು ಹತ್ತಿ ಕುಳಿತಾಗ ಅದೇನೋ ಒಂದು ತೆರನಾದ ಅವ್ಯಕ್ತ ತಳಮಳ ಕಾಡಹತ್ತಿತ್ತು. ಬಹುಶಃ ಮೊದಲ ಬಾರಿಗೆ ಒಂಟಿಯಾಗಿ ಇಷ್ಟು ದೂರ ಪಯಣಿಸುತ್ತಿದ್ದುದೇ ಕಾರಣವಿದ್ದಿರಬಹುದು.

ಅಂದ ಹಾಗೆ, ನಾನು ಸುಧೀಂದ್ರ ರಾವ್. ಬೆಂಗಳೂರಿನಲ್ಲಿ ವಾಸವಿರುವ ಐ ಟಿ ಉದ್ಯಮಿ. ಛಾಯಾಗ್ರಹಣದ ಬಗ್ಗೆ ನಾನು ಅತೀವ ಅಭಿರುಚಿಹೊಂದಿದ್ದೇನೆ.

ರಾಮ್ ನಗರ ತಲುಪಿದಾಗ ರಾತ್ರಿ ಹನ್ನೊಂದು ದಾಟಿತ್ತು. ಹೋಟೆಲ್ಲಿಗೆ ಚೆಕ್ ಇನ್ ಆಗಿ ಊಟ ಮುಗಿಸಿದ್ದೇ, ಪ್ರಯಾಣದ ಆಯಾಸವು ನಿದ್ರೆಯ ರೂಪದಲ್ಲಿ ಆವರಿಸಿಕೊಂಡುಬಿಟ್ಟಿತ್ತು.

ಬೆಳಿಗ್ಗೆ ಏಳಕ್ಕೆಲ್ಲಾ ಅಣಿಯಾಗಿ ರಿಸೆಪ್ಷನ್ ಬಳಿ ಅತ್ತಿತ್ತ ಸುಳಿದಾಡುತ್ತಿರುವಾಗಲೇ ನಮ್ಮ ಮಾರ್ಗದರ್ಶಿ ಸುಧೀರ್ ಶಿವರಾಂ ಅವರ ಭೇಟಿಯಾಯಿತು. ಅವರ ಭೇಟಿಯಿಂದ ನನ್ನ ಪ್ರಯಾಣದ ಆಯಾಸವೆಲ್ಲಾ ಕಳೆದು ಉತ್ಸಾಹದ ಸೆಲೆಯೊಂದು ಮನದಲ್ಲಿ ಮೂಡಿತು. ಹಾಗೆಯೇ ಕೆಲಹೊತ್ತು ಮಾತನಾಡುವಷ್ಟರಲ್ಲಿ ನಮ್ಮ ಆತ್ಮೀಯತೆ ಬೆಳೆದು ಹೋಗಿತ್ತು.

ಅಷ್ಟರಲ್ಲಿ ತಂಡದ ಇತರರೂ ನಮ್ಮನ್ನು ಕೂಡಿಕೊಂಡರು. ಸಫಾರಿ ಜೀಪಿನಲ್ಲಿ ಕಾರ್ಬೆಟ್ನ ದಿಕ್ಕಾಲ ವಲಯದತ್ತ ನಮ್ಮ ಯಾತ್ರೆ ಮೊದಲಾಯಿತು.

ಹಾದಿಯಲ್ಲಿ ಹಲವು ಸುಂದರ ಹಕ್ಕಿಗಳಾದ ರಾಜಹಕ್ಕಿ/ನೊಣ ಹಿಡುಕ , ಚಿತ್ರಪಕ್ಷಿ , ಉದ್ದ ಬಾಲದ ಅಗಲ ಕೊಕ್ಕಿಗ, ಖಲೀಜ್ ಜೀವಂಜೀವಕ್ಕಿಗಳು ಎದುರಾದವು. ಮಾರ್ಗದಲ್ಲಿಒಂದಿಷ್ಟು ವಿರಮಿಸಿದ್ದರಿಂದ ಕಾರ್ಬೆಟ್ ತಲುಪುವ ವೇಳೆಗೆ ಮಧ್ಯಾಹ್ನದ ಹನ್ನೆರಡಾಗಿತ್ತು.

ಅಲ್ಲಿ ನಮಗಾಗಿ ರೂಮುಗಳು ಕಾದಿರಿಸಲ್ಪಟ್ಟಿದ್ದವು. ಸ್ವಲ್ಪ ಫ್ರೆಶ್ ಆಗಿ ಇತ್ತ ರೆಸ್ಟೋರೆಂಟಿನ ಬಳಿ ಊಟಕ್ಕೆ ಬಂದೆ. ಅಲ್ಲಿಯೇ ಹಲವರು ಊಟಕ್ಕಾಗಿ ಕುಳಿತ್ತಿದ್ದರು. ಅವರೆಲ್ಲರೂ ನನ್ನಂತೆಯೇ ಕಾರ್ಬೆಟ್ ಸಫಾರಿಗೆ ಬಂದಿದ್ದವರೇ. ಮುಂದಿನ ನಾಲ್ಕುದಿನಗಳು ಒಟ್ಟಿಗೆ ಕಳೆಯಬೇಕಿದ್ದ ಅವರೊಡನೆ ನನ್ನ ಪರಿಚಯ ಮಾಡಿಕೊಂಡೆ.

ಸರಿಯಾಗಿ ೨.೫೦ಕ್ಕೆ ನಾವೆಲ್ಲರೂ ಪಿಕಪ್ ಪಾಯಿಂಟ್ನಲ್ಲಿ ಸೇರಿದೆವು. ಕಾರ್ಬೆಟ್ಟಿನ ಮಧ್ಯಾಹ್ನದ ಸಫಾರಿಯ ಅವಧಿಯು ಮೂರಕ್ಕೆ ಶುರುವಾಗಿ ಸಂಜೆ ಏಳಕ್ಕೆ ಕೊನೆಗೊಳ್ಳುತ್ತದೆ.

ಸರಿಯಾಗಿ ೨.೫೦ಕ್ಕೆ ನಾವೆಲ್ಲರೂ ಪಿಕಪ್ ಪಾಯಿಂಟ್ ನಲ್ಲಿ ಸೇರಿದ್ದೆವು. ಕಾರ್ಬೆಟ್ನ ಮಧ್ಯಾಹ್ನದ ಸಫಾರಿಯ ಅವಧಿಯು ಮಧ್ಯಾಹ್ನ ಮೂರಕ್ಕೆ ಮೊದಲುಗೊಂಡು ಸಂಜೆ ಏಳಕ್ಕೆ ಕೊನೆಗೊಳ್ಳುತ್ತದೆ.

ಮೂರು ಜನರಿಗೊಂದು ತಂಡದಂತೆ ಮಾಡಿ ಒಂದೊಂದು ಗುಂಪಿಗೂ ಒಂದೊಂದು ಪ್ರತ್ಯೇಕವಾದ ಜೀಪನ್ನು ಗೊತ್ತು ಮಾಡಲಾಗಿತ್ತು. ಜೀಪಿನ ಚಾಲಕರೇ ಅರಣ್ಯದ ಮಾರ್ಗದರ್ಶಿಗಳಾಗಿದ್ದರು. ಹೊರಡುವ ಮುನ್ನ ಸುಧೀರ್ ಅವರು ಕ್ಯಾಮೆರಾದ ಬೇಸಿಕ್ ಸೆಟ್ಟಿಂಗುಗಳಿಂದಲೇ ಫೋಟೋಗಳನ್ನು ಕ್ಲಿಕ್ಕಿಸುವಂತೆಯೂ, ಅದರಿಂದ ತಾವು ಅವುಗಳ ನೈಜತೆ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ ಸಲಹೆಗಳನ್ನು ನೀಡಲು ಅನುಕೂಲವಾಗುವುದೆಂದೂ ಹೇಳಿದರು.

ಸರಿಯಾಗಿ ಮೂರು ಗಂಟೆಗೆ ಗೇಟುಗಳು ತೆರೆದವು. ಎಲ್ಲಾ ಜೀಪುಗಳೂ ಕಾಡಿನ ಒಳಗೆ ಹೊರಡಲಾರಂಭಿಸಿದವು.

ಕಾಡಿನ ಒಳಗೆ ಹೊರಟ ನಮ್ಮ ಜೀಪು ಪ್ರಖ್ಯಾತ ಸಾಂಬಾರ್ ರೋಡನ್ನು ಹಾದು ಮುಂದೆ ಸಾಗುತ್ತಿರುವಾಗಲೇ ನಮ್ಮ ಜೀಪಿನ ಡ್ರೈವರ್ ಹಾಗೂ ಮಾರ್ಗದರ್ಶಕನಾಗಿದ್ದ ‘ನನ್ನೆ'(ಇರ್ಫಾನ್ ಖಾನ್) ಯೊಡನೆ ನನ್ನನ್ನು ಪರಿಚಯಿಸಿಕೊಂಡೆ. ಮತ್ತಷ್ಟು ಮುಂದೆ ಸಾಗುವಷ್ಟರಲ್ಲಿ, ಕಾಡನ್ನು ಹಾದು ಹೋಗುವ ರಾಮ್ ಗಂಗಾ ನದಿಯಲ್ಲಿ ಲೋಕಾಭಿರಾಮವಾಗಿ ಆಟವಾಡುತ್ತಿದ್ದ ಕೆಲ ಆನೆಗಳು ಗೋಚರವಾದವು.

ಮುಂದೆ ಸಾಗಿ ರಾಮ್ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಾನವನಿರ್ಮಿತ ಕೆಳಸೇತುವೆಯನ್ನು ದಾಟಿ ನದಿಯ ಇನ್ನೊಂದು ದಡವನ್ನು ತಲುಪಿದೆವು. ನಾನಂತೂ ಆ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆ. ನಮ್ಮ ಜೀಪನ್ನು ಹೊರತು ಪಡಿಸಿ ಕಾಡಿನ ಆ ಭಾಗದಲ್ಲಿ ಮತ್ತಾವ ಮಾನವರ ಸುಳುಹೂ ಇರಲಿಲ್ಲ. ಊಟದ ಸಮಯದಲ್ಲಿ ನಾನು ಹಾಗೂ ಆಶು ಚೋಪ್ರಾ ಮಾತನಾಡುತ್ತಾ ಕಾಡಿನೊಳಗೆ ಹುಲಿಗಳನ್ನು ಕಾಣುವ ಸಂಭವಗಳನ್ನು ಚರ್ಚಿಸಿದೆವು. ಅದನ್ನು ಮೆಲುಕು ಹಾಕುತ್ತಿರುವಾಗಲೇ ‘ನನ್ನೆ’ಯ ಉದ್ಗಾರ ನಮ್ಮ ಕಿವಿಗೆ ತಗುಲಿತು “ಸರ್, ಅಗೋ ಅಲ್ಲಿ ನೋಡಿ, ಹುಲಿ!!” ಎಲ್ಲರೂ ಸ್ತಬ್ಧರಾಗಿ ಬಲಕ್ಕೆ ತಿರುಗಿ ನೋಡಲು …….

ಹುಲಿ – © ಸುಧೀಂದ್ರ ರಾವ್

ಇದೇ, ಮೇ ೨೦೧೬ರಿಂದ ಕಾರ್ಬೆಟ್ಟಿನ ಪ್ರಸಿದ್ಧ ಹುಲಿ ಎಂದೇ ಪ್ರಖ್ಯಾತವಾಗಿರುವ, ಪಾರೋ ಎಂದು ಪ್ರೀತಿಯಿಂದ ಕರೆಯಲ್ಪಡುವ ‘ಪಾರ್ ವಾಲಿ’.

ಈಗಾಗಲೇ ತಿಳಿಸಿದಂತೆ ನಮ್ಮ ಜೀಪು ಮಾತ್ರ ಆ ಭಾಗದಲ್ಲಿ ಇದ್ದುದರಿಂದ ಪಾರೋಳ ಈ ದರ್ಶನ ನಮಗಾಗಿಯೇ ಮೀಸಲಿಟ್ಟಂತೆ ಭಾಸಗೊಂಡೆವು. ಮತ್ತಾವ ಮಾತುಗಳೂ ಹೊರಡದಂತೆ ಕ್ಯಾಮರಾದ ಶಟರ್ ಬಟನ್ ಕ್ಲಿಕ್, ಕ್ಲಿಕ್ಕೆಂದು ಪಠಿಸುವುದು ಮಾತ್ರವೇ ಕಿವಿಗೆ ಬೀಳುತ್ತಿತ್ತು.

ಹುಲಿ – © ಸುಧೀಂದ್ರ ರಾವ್

ಪಾರೋ ಸುಮಾರು ಐದು ವರ್ಷದ ಆಕರ್ಷಕವಾದ ಹೆಣ್ಣು ಹುಲಿ. ದಿಕ್ಕಾಲ ಅರಣ್ಯದ ವಿಶ್ರಾಂತಿ ಗೃಹದ ಎದುರು ಭಾಗಕ್ಕೆ, ರಾಮ್ ಗಂಗಾ ನದಿಯ ಗುಂಟ ಹಬ್ಬಿರುವ ಅರಣ್ಯವೇ ಪಾರೋಳ ಸಾಮ್ರಾಜ್ಯ!

ಅಷ್ಟು ಸಮೀಪದಿಂದ ಹುಲಿಯೊಂದನ್ನು ನಾನು ಕಂಡದ್ದು ಇದೇ ಮೊದಲು. ಹುಲಿಯ ದರ್ಶನದಿಂದ ಖುಷಿಯಾಗಿದ್ದ ಎಲ್ಲರ ನಡುವೆ hi -fi ಗಳ ವಿನಿಮಯಗಳಾದವು. ಜನರನ್ನು ಅನುದಿನವೂ ನೋಡಿ ಅಭ್ಯಾಸವಿದ್ದುದರಿಂದಲೋ ಅಥವಾ ನಾವೆಲ್ಲರೂ ನಿಶ್ಶಬ್ದದಿಂದ ಇದ್ದುದರಿಂದಲೋ, ಒಟ್ಟಾರೆ ಪಾರೋ ನಮ್ಮ ಇರುವಿಕೆಯ ಬಗೆಗೆ ಕಿಂಚಿತ್ತೂ ಲಕ್ಷ್ಯ ಕೊಡದೆ ನಾಲ್ಕು ನಿಮಿಷಗಳ ನಂತರ ತನ್ನ ದಿವ್ಯ ನಿರ್ಲಕ್ಷ್ಯತೆಯಿಂದ ಕಾರ್ಬೆಟ್ಟಿನ ಉದ್ದುದ್ದಕ್ಕೆ ಬೆಳೆದಿದ್ದ ಹುಲುಸಾದ ಚಿನ್ನದ ಬಣ್ಣದ ಹುಲ್ಲುಗಾವಲಿನಲ್ಲಿ ಮರೆಯಾಗಿ ಹೋದಳು!

ನಮ್ಮ ಸಫಾರಿಗೆ ಅದ್ಭುತವಾದ ಪ್ರಾರಂಬ ದೊರಕಿತ್ತು. ನಂತರ ದಿಕ್ಕಾಲದ ಹುಲ್ಲುಗಾವಲಿನೆಡೆಗೆ ನಮ್ಮ ಸಫಾರಿಯು ಮುಂದುವರೆದಂತೆ ಅಲ್ಲಿ ಮೇವಿನಲ್ಲಿ ನಿರತವಾಗಿದ್ದ ಒಂದಷ್ಟು ಆನೆಯ ಹಿಂಡುಗಳು ಗೋಚರವಾದವು. ಅವುಗಳ ಫೋಟೋಗಳನ್ನು ನಾನು ಕ್ಲಿಕ್ಕಿಸಿಕೊಂಡೆನಾದರೂ ಫೋಟೋ ತೆಗೆದ ಬಗೆಗೆ ಅಷ್ಟೊಂದು ತೃಪ್ತಿಯಾಗಲಿಲ್ಲ.

ಸಂಜೆಯ ಏಳರ ವೇಳೆಗೆ ಸರಿಯಾಗಿ ನಾವು ಕಾಡಿನ ಸುರಕ್ಷಿತ ವಿಶ್ರಾಂತಿಗೃಹಕ್ಕೆ ಮರಳಿದೆವು. ಕಾರ್ಬೆಟ್ಟಿನ ನಿಯಮಗಳು ಬಹಳ ಕಟ್ಟುನಿಟ್ಟು ಹಾಗೂ ಅಲ್ಲಿನ ಡ್ರೈವರ್ಗಳು ಅದನ್ನು ಅಷ್ಟೇ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ನಮ್ಮ ಫೋಟೋಗಳನ್ನು ಪರಿಶೀಲಿಸಿದ ಸುಧೀರ್ ಮರುದಿನದ ಕ್ಲಿಕ್ಕುಗಳಿಗೆ ಕೆಲವು ಸಲಹೆಗಳನ್ನು ನೀಡಿದರು. ಅಷ್ಟರಲ್ಲಿ ಊಟದ ಸಮಯವಾದ್ದರಿಂದ ಊಟ ಮಾಡಿ ವಿರಮಿಸುವಲ್ಲಿಗೆ ಮೊದಲನೆಯ ದಿನವು ಕಳೆದು ಹೋಗಿತ್ತು.

2ನೆಯ ದಿನ: 

ನಾವೆಲ್ಲರೂ ಬೆಳಗಿನ ಜಾವವೇ ಎದ್ದು ಎರಡನೆಯ ದಿನದ ಸಫಾರಿಗೆ ತಯಾರಾಗಿದ್ದೆವು. ಬೆಳಗಿನ ಸಫಾರಿಯು ಮುಂಜಾವಿನ 6ಕ್ಕೆ ಶುರುವಾಗುತ್ತದೆ. ಎಂದಿನಂತೆ ನಮ್ಮ ನಮ್ಮಜೀಪುಗಳನ್ನೇರಿ ಕುಳಿತೆವು. ಹಿಂದಿನ ದಿನದ ಸುಧೀರ್ ಸಲಹೆಗಳಿಂದ, ನಮ್ಮ ಫೋಟೋಗ್ರಫಿಯಲ್ಲಿ ಇಂದು ಹಲವಾರು ಸುಧಾರಣೆಗಳು ಬರುವ ವಿಶ್ವಾಸದಲ್ಲಿ ಇಂದಿನ ಸಫಾರಿಗೆಹೊರಟಿದ್ದೆವು. ಕ್ಯಾಮರದಾ ಬಗೆಗಿನ ಒಂದಷ್ಟು ತಿಳುವಳಿಕೆ ಹೆಚ್ಚಾಗಿದ್ದರಿಂದ ನನ್ನಲ್ಲಿ ಆತ್ಮವಿಶ್ವಾಸ ಇಮ್ಮಡಿಸಿ ಇಂದಿನ ಸಫಾರಿಯ ಬಗೆಗೊಂದು ಸಹಜವಾದ ಕೌತುಕವುಏರ್ಪಟ್ಟಿತ್ತು.

ಮೊದಲು ದಿಕ್ಕಾಲದ ಹುಲ್ಲುಗಾವಲಿನೆಡೆಗೆ ಹೊರಟೆವು. ಅಲ್ಲಿದ್ದ ಆನೆಗಳ ಹಿಂಡು ನಮ್ಮನ್ನು ಸ್ವಾಗತಿಸಿದವು. ಅವುಗಳ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಸಾಂಬಾರ್ರಸ್ತೆಯೆಡೆಗೆ ಹೊರಟೆವು. ಅಷ್ಟರಲ್ಲಿ ಕೆಲವು ಜೀಪುಗಳು ಪಾರೋಳ ದರ್ಶನದ ಅದೃಷ್ಟ ಪರೀಕ್ಷಿಸಲು ತೆರಳುತ್ತಿದ್ದವು.

ರಾಮ್ ಗಂಗಾ ನದಿಯಲ್ಲಿ ಮೀಯುತ್ತಿದ್ದ ಕೆಲವು ಆನೆಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ನಂತರ ಪಾರೋಳ ಸಾಮ್ರಾಜ್ಯದೆಡೆಗೆ ಹೊರಟು ನಿಂತೆವು.

ಆನೆ – © ಸುಧೀಂದ್ರ ರಾವ್

ಇಂದು ಕೂಡಾ ಪಾರೋ ಪ್ರತ್ಯಕ್ಷಳಾಗುವಳೆಂಬ ಬಯಕೆಯಲ್ಲಿದ್ದೆವು. ಆದರೆ, ಕಾಡಿನ ನಿಯಮವೇ ಬೇರೆಯಲ್ಲವೇ! ಎಲ್ಲಿ, ಯಾವಾಗ ಹಾಗೂ ಹೇಗೆ ಕಾಣಿಸಿಕೊಳ್ಳಬೇಕೆಂಬುದು ಪ್ರಾಣಿಗಳಿಗೆ ಬಿಟ್ಟ ವಿಷಯವೇ ವಿನಃ ಮಾನವರಾದ ನಾವು ಕೇವಲ ಕಾಯುವಿಕೆಯನ್ನು ಹೊರತುಪಡಿಸಿ ಮತ್ತಾವ ಕಾರ್ಯಶಕ್ತರೂ ಆಗಿರಲು ಸಾಧ್ಯವಿಲ್ಲ! ಉತ್ತಮ ಫೋಟೋಗ್ರಫಿಗೆ ಅವಶ್ಯವಿರುವ ಅಪಾರ ಸಹನೆಯನ್ನು ಮನದಲ್ಲಿ ತುಂಬಿಕೊಂಡು ಗಂಟೆಗಟ್ಟಲೆ ಕಾದರೂ ಪಾರೋಳ ಪತ್ತೆಯೇ ಇಲ್ಲ!

ಸಣ್ಣ ಕಳ್ಳಿಪೀರ – © ಸುಧೀಂದ್ರ ರಾವ್

ಅರಣ್ಯದ ನಿಯಮದ ಬಗೆಗೆ ಮಾತನಾಡಿಕೊಳ್ಳುತ್ತಾ ಹಿಂದಿರುಗಿದಾಗ ಬೇರೆಯ ಜೀಪಿನವರು ಪಾರೋಳನ್ನು ಮತ್ತೆಲ್ಲೋ ಸಂಧಿಸಿದ್ದನ್ನು ತಿಳಿಸಿದರು. ಪಾರೋ ಸಿಗದಿದ್ದರೂ ಆನೆಗಳ ಒಂದಷ್ಟು ಒಳ್ಳೆಯ ಫೋಟೋಗಳನ್ನು ಕ್ಲಿಕ್ಕಿಸಿದ್ದರಿಂದ ನಮಗೆ ಏನೂ ಬೇಸರವೆನಿಸಲಿಲ್ಲ.

ಮಧ್ಯಾಹ್ನದ ಸಫಾರಿಗೆ ಹೊರಡುವ ಮುನ್ನ ಕ್ಯಾಮರಾ ಪ್ಯಾರಾಮೀಟರ್ ಗಳ ಬಗೆಗೆ ಮತ್ತೊಂದು ಪಾಠ ಇತ್ತು.

ಮಧ್ಯಾಹ್ನದ ಸಫಾರಿಯನ್ನು ಕೂಡಾ ಆನೆ, ಜಿಂಕೆಗಳ ಹಾಗೂ ಹಲವಾರು ಹಕ್ಕಿಗಳ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಕಳೆದೆವು. ಕಾರ್ಬೆಟ್ಟಿನಲ್ಲಿ ಹುಲಿಗಳೂ ಕೂಡಾ ಆಕರ್ಷಣೆಯ ಒಂದು ಭಾಗವೇ ಹೊರತು ಕಾರ್ಬೆಟ್ ಕೇವಲ ಹುಲಿಗಳ ಧಾಮವಾಗಿ ಮಾತ್ರ ಉಳಿದಿಲ್ಲ. ಕಾರ್ಬೆಟ್ಟಿನ ಆ ದಟ್ಟಾರಣ್ಯದಲ್ಲಿ ಬೃಹದ್ಗಾತ್ರದ ಸಸ್ತನಿಯಾದ ಆನೆಗಳು ಕೂಡಾ ಅರಣ್ಯದ ದಟ್ಟತೆಯ ಎದುರು ಅದೆಷ್ಟು ಚಿಕ್ಕದಾಗಿ ಕಾಣುತ್ತವೆ! ಮನೋಲ್ಲಾಸ ನೀಡುವ ಸುಂದರ ಭೂದೃಶ್ಯಾವಳಿಗಳಿಂದ ಕೂಡಿ ಹಾಗೂ ವಿವಿಧ ಪ್ರಾಣಿ-ಪಕ್ಷಿ ಸಂಕುಲಕ್ಕೆ ಆಶ್ರಯತಾಣವಾಗಿ ಕಾರ್ಬೆಟ್ ಹಬ್ಬಿ ನಿಂತಿಹುದು. ದಿಕ್ಕಾಲ ಅರಣ್ಯ ಪ್ರದೇಶ ಹಾಗೂ ಅದರ ಪ್ರಖ್ಯಾತ ಹುಲ್ಲುಗಾವಲು,ಕಾಡಿನ ಜೀವವಾಹಿನಿಯಾಗಿ ಹರಿಯುವ ರಾಮ್ ಗಂಗಾ ನದಿ, ಓಹ್!ಅದೊಂದು ಸ್ವರ್ಗಸದೃಶ ವಾತಾವರಣವೇ ಸರಿ.

ಮತ್ತಿತರ ಪ್ರವಾಸಿಕೇಂದ್ರಗಳಾದ ‘ಥಂಡಿ ಸಡಕ್ ‘, ‘ಸಾಂಬಾರ್ ರಸ್ತೆ’, ನದಿ ಪಾರ್ ಅಥವಾ ಪಾರೋಳ ಸಾಮ್ರಾಜ್ಯ ಹಾಗೂ ನದಿಯ ಮೇಲ್ದಂಡೆಗಳು ನನ್ನ ಮನಸ್ಸಿನ ಮೇಲೆ ಇನ್ನಿಲ್ಲದಂತೆ ಪರಿಣಾಮ ಬೀರಿದವು.

ಈ ಹಿಂದೆ ಹೇಳಿದಂತೆ ಹುಲಿಗಳು ಇಲ್ಲಿ ಗೋಚರವಾಗುವುದು, ಬಿಡುವುದು ಸಂಪೂರ್ಣವಾಗಿ ಅದರ ಆಯ್ಕೆಗೆ ಬಿಟ್ಟ ವಿಚಾರವೇ ಹೊರತು ನಮ್ಮದು ಎನ್ನುವಂತಹದ್ದೇನೂ ಇಲ್ಲ.ಇದೇ ಕಾಡಿನ ತತ್ವ! ಅದೃಷ್ಟವಿದ್ದರೆ ಸಫಾರಿ ಮುಗಿದು ಮರಳಿ ಹೋಗುವಾಗ ಬೇಕಾದರೂ ಪಾರೋ ಪ್ರತ್ಯಕ್ಷಳಾದಾಳು! ಯಾರಿಗೆ ಗೊತ್ತು!

ನಮ್ಮ ಎರಡನೆಯ ದಿನದ ಸಫಾರಿಯು ಮುಗಿಯುವ ಹಂತಕ್ಕೆ ಬಂದರೂ ಪಾರೋ ಮಾತ್ರ ಪ್ರತ್ಯಕ್ಷಳಾಗಲಿಲ್ಲ. ಬಹುಶಃ ಬೇರೆಲ್ಲಿಯೋ ವಿರಮಿಸಿದ್ದಿರಬಹುದೆಂದು ನಾವು ಊಹಿಸಿದೆವು. ನಮ್ಮ ಜೀಪಿನ ಡ್ರೈವರ್ “ಪಾರೋ ಹಸಿದಿದ್ದಾಳೆಂದು ತೋರುತ್ತದೆ.ಇಷ್ಟರಲ್ಲೇ ಶಿಕಾರಿ ಮುಗಿಸಿಕೊಂಡು ಬರಬಹುದು” ಎಂದು ಭವಿಷ್ಯ ನುಡಿದ. ವಿಶ್ರಾಂತಿಗೃಹಕ್ಕೆ ಹಿಂದುರಿಗಿದ ಮೇಲೆ ಸುಧೀರ್ ಜೊತೆ ಮತ್ತೊಂದು ತರಬೇತಿಯೊಂದಿಗೆ ಎರಡನೆಯ ದಿನವನ್ನು ಮುಗಿಸಿದೆನು.

ಆ ದಿನ ಬೆಳಿಗ್ಗೆ ಹಸಿರು ಪಾಚಿಯಿಂದ ತುಂಬಿದ್ದ ಕೊಳವೊಂದನ್ನು ಹಾದು ಹೋಗುವಾಗ ಈ ಕೊಳದಲ್ಲಿದ್ದಾಗ ಹುಲಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕೆಂದು ಎಣಿಸಿಕೊಂಡು,ನಂತರ ಕಾಡಿನ ತತ್ವವು ಪ್ರಾಣಿಗಳ ಪರವಾಗಿಯೇ ಹೊರತು ಕ್ಯಾಮರಾ ಹೊತ್ತು ಹೊರಡುವ ಮಾನವನ ಪರವಲ್ಲವೆಂದು ನೆನೆದು ಮರಳಿದ್ದೆ. ಆದರೂ ನನ್ನ ಅದೃಷ್ಟ ಚೆನ್ನಾಗಿಯೇ ಇತ್ತೆಂದು ಹೇಳಬೇಕು. ಹುಲಿಯನ್ನು ಆ ಕೊಳದಲ್ಲಿ ಛಾಯಾಗ್ರಹಿಸದಿದ್ದರೂ ಸುಂದರವಾದ ಜಿಂಕೆಯೊಂದನ್ನು ನನ್ನ ಕ್ಯಾಮೆರಾ ಕಣ್ಣಿನಲ್ಲಿ ಸರೆಹಿಡಿದೆ!

ಸಾಂಬಾರ್ ಜಿಂಕೆ – © ಸುಧೀಂದ್ರ ರಾವ್

3ನೆಯ ದಿನ:

ಮುಂಜಾನೆಯ ಸಫಾರಿಯಲ್ಲಿ, ಹುಲ್ಲುಗಾವಲಿನಲ್ಲಿ ಒಂಟಿಯಾಗಿ ಅಲೆದಾಡುವ, ಹಿಂಡುಗಳಲ್ಲಿದ್ದ ಹಾಗೂ ಮೈಥುನದಲ್ಲಿದ್ದ ಕೆಲ ಆನೆಗಳನ್ನು ಕಂಡೆವು. ಅಲ್ಲಿ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡು ಬೇಗಬೇಗನೆ ನಾವು ಪಾರೋಳ ದರ್ಶನಾರ್ಥಿಯಾಗಿ ಹೊರಟೆವು, ಇಂದಾದರೂ ಪಾರೋಳನ್ನು ಕಾಣುವ ಒಂದು ಭರವಸೆಯನ್ನು ಇರಿಸಿಕೊಂಡು!

ಹಾದಿಯಲ್ಲಿ ಕೆಲವು ಪಾದದ ಹೆಜ್ಜೆಗುರುತುಗಳನ್ನು ಕಂಡೆವಾದರೂ ಅವು ಹುಲಿಯದ್ದೇ ಎಂದು ಖಡಾಖಂಡಿತವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ.

ಕಳೆದ ಬಾರಿ ಗೋಚರವಾಗಿದ್ದ ಬೆಟ್ಟದಿಂದ ಪಾರೋ ಕೆಳಗಿಳಿದು ಬರಬಹುದೆಂಬ ನಿರೀಕ್ಷೆಯಲ್ಲಿ ನಾವು ಬೆಟ್ಟದ ತಪ್ಪಲಲ್ಲೇ ಕಾಯುತ್ತಿದ್ದೆವು. ಆದರೆ! ಪಾರೋ ನಮ್ಮ ಊಹೆಗೆ ಪೂರ್ಣ ವ್ಯತಿರಿಕ್ತವಾಗಿ ಹಿಂದಿನಿಂದ ಪ್ರತ್ಯಕ್ಷಳಾದಳು.

ಕಾಡು! ಎಚ್ಚರಿಕೆಯೆಂಬುದು ಇಲ್ಲಿ ಬಹಳ ಮುಖ್ಯವಾದ ಅಂಶ. ನಮ್ಮ ಕಲ್ಪನೆ-ಲೆಕ್ಕಾಚಾರಗಳೆಲ್ಲವನ್ನೂ ತಲೆಕೆಳಗು ಮಾಡುವ ದೈತ್ಯಶಕ್ತಿ ಕಾಡಿಗಿದೆ. ಅದರ ಮೇಲಿನ ನಮ್ಮ ನಿಯಂತ್ರಣವೆಂಬುದು ಕೇವಲ ಸೊನ್ನೆಯಷ್ಟೇ!

ನಿನ್ನೆ, ನಮ್ಮ ಡ್ರೈವರ್ ಹೇಳಿದ್ದು ಸರಿಯೇ ಆಗಿತ್ತು. ಪಾರೋ ತನ್ನ ಶಿಕಾರಿಯನ್ನು ಮುಗಿಸಿ ಹಿಂದಿರುಗುತ್ತಿದ್ದಳು. ಅವಳ ಶಿಕಾರಿಗೆ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿರದಿದ್ದರೂ ಅವಳ ಕೋರೆಹಲ್ಲಿನ ಹಾಗೂ ಪಾದದ ಉಗುರುಗಳ ಮೇಲಿದ್ದ ರಕ್ತದ ಕಲೆಗೆಳು ಅದನ್ನು ಸಾರಿ ಹೇಳುತ್ತಿದ್ದವು. ಪಾರೋ ನೇರವಾಗಿ ನೀರಿಗಿಳಿದು ತನ್ನ ಶಿಕಾರಿಯ ಕಾವನ್ನು ತಣಿಸಿಕೊಂಡು ಮತ್ತೆ ಬೆಟ್ಟವೇರಿ ತನ್ನ ಆಹಾರ ಪೇರಿಸಿಟ್ಟ ಸ್ಥಳಕ್ಕೆ ಹೊರಟುಹೋದಳು.

ಹುಲಿ – © ಸುಧೀಂದ್ರ ರಾವ್
ಹುಲಿ – © ಸುಧೀಂದ್ರ ರಾವ್

೭ನಿಮಿಷಗಳ ಕಾಲ ಘಟಿಸಿದ ಈ ನೋಟ ಅವಿಸ್ಮರಣೀಯ. ಪಾರೋಳನ್ನು ಕಂಡ ಮೇಲೆ ಸಂತಸಗೊಂಡು, ಬೇರೆಯ ಪ್ರಾಣಿ ಪಕ್ಷಿಗಳನ್ನು ಹುಡುಕುತ್ತಾ ಇನ್ನಷ್ಟು ವಲಯಗಳಿಗೆ ತೆರಳಿದೆವು. ಪಾರೋ ಹೊರತಾಗಿ ಇನ್ನುಳಿದ ಹುಲಿಗಳನ್ನು ಕಾಣಲು ಕೂಡಾ ಉತ್ಸುಕರಾಗಿದ್ದೆವು. ಮಧ್ಯಾಹ್ನದ ಊಟಕ್ಕೆ ಕುಳಿತಾಗ ಎಲ್ಲರ ಬಾಯಲ್ಲೂ ಪಾರೋಳದೇ ಮಾತಾಗಿತ್ತು.

ಹುಲಿ – © ಸುಧೀಂದ್ರ ರಾವ್

ಊಟದ ನಂತರದ ಸಫಾರಿಯಲ್ಲಿ ನನ್ನ ಮೊದಲ ಸೆರೆಯೇ ಈ ಕಂದು ಬಣ್ಣದ ಗೂಬೆ. ಕಾರ್ಬೆಟ್ಟಿನ ಸಫಾರಿಯು ಇಷ್ಟೊಂದು ಅನುಭವವೇದ್ಯವಾಗಿರುವುದೆಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ. ನಿಜಕ್ಕೂ ಇದು ನನ್ನ ಜೀವಮಾನದ ಶ್ರೇಷ್ಠ ಅನುಭವಗಳಲ್ಲಿ ಒಂದಾಗುವುದಂತೂ ಸತ್ಯ.

ಮೀನುಗೂಬೆ – © ಸುಧೀಂದ್ರ ರಾವ್

ಒಂದು ಕಣ್ಮುಚ್ಚಿ ಮತ್ತೊಂದು ಕಣ್ಣು ಮಾತ್ರ ತೆರೆದು ಕುಳಿತಿದ್ದ ಗೂಬೆಯು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಕಂಡಿತು. ಅದರ ಫೋಟೋಗಳನ್ನು ಕ್ಲಿಕ್ಕಿಸುವಾಗಲೇ ಪಾರೋ ಯಾವ ಗಳಿಗೆಯಲ್ಲಿ ಬೇಕಾದರೂ ಕೆಳಗಿಳಿದು ಬಂದಾಳೆಂಬ ಜ್ಞಾನೋದಯವಾಗಿ ಮುಂದುವರೆದೆವು. ಡ್ರೈವರ್ “ಆ ಗೂಬೆಯು ನಾವು ವಾಪಸ್ ಬರುವ ತನಕವೂ ಇಲ್ಲೇ ಇರುವುದು. ಈಗ ಮುಂದೆ ಹೋಗೋಣ” ಎಂಬ ಸಲಹೆಯನ್ನಿತ್ತ. ಆತನ ಮಾತಿನಂತೆಯೇ ನಾವು ಹಿಂದಿರುಗುವಾಗಲೂ ಆ ಗೂಬೆಯು ಅಲ್ಲೇ ಕುಳಿತಿತ್ತು! ಆಗಲೂ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು.

ನಿಜ, ಇದು ಮತ್ತೆ ಹುಲಿಗಾಗಿ ಕಾಯುವ ಸಮಯ. ಈ ಸಲ ನಮ್ಮ ಎಣಿಕೆಯಂತೆಯೇ ಬೆಟ್ಟದಿಂದ ಕೆಳಗಿಳಿದು ಬಂದ ಪಾರೋ ಸೀದಾ ನೀರಿಗಿಳಿದಳು. ಅವಳು ನೀರಿಗಿಳಿಯುವ ಭಂಗಿ, ಜಲಕ್ರೀಡೆಯಲ್ಲಿ ನಿರತಳಾಗಿದ್ದ ಅವಳ ಕೆಲವು ಫೋಟೋಗಳನ್ನು ಕ್ಲಿಕ್ಕಿಸುವಲ್ಲಿ ನಾನು ಯಶಸ್ವಿಯಾಗಿದ್ದೆ.

ಒಟ್ಟಾರೆಯಾಗಿ ಆ ಒಂದು ಗಂಟೆಯು ನಿಮಿಷವೊಂದರಂತೆ ಕಳೆದು ಹೋಗಿತ್ತು. ಅತ್ತ ಪಾರೋ ತನ್ನ ಬೇಟೆಯನ್ನು ಇಟ್ಟಿದ್ದ ಬೆಟ್ಟದೆಡೆಗೆ ಹೊರಟ ಕೂಡಲೇ ನಾವು ಇತ್ತ ವಿಶ್ರಾಂತಿಗೃಹದೆಡೆಗೆ ಹೊರಟೆವು.

ಹುಲಿ – © ಸುಧೀಂದ್ರ ರಾವ್
ಹುಲಿ – © ಸುಧೀಂದ್ರ ರಾವ್

4ನೆಯ ದಿನ:

ಹಿಂದಿನ ದಿನ ಪಾರೋಳನ್ನು ಎರಡು ಬಾರಿ ದರ್ಶಿಸಿದ್ದ ಕ್ಷಣಗಳನ್ನೇ ಮೆಲುಕು ಹಾಕುತ್ತ ನಾಲ್ಕನೆಯ ದಿನವನ್ನು ಮೊದಲು ಮಾಡಿದೆವು. ಇಂದು ಆನೆಗಳ ಹಿಂಡು, ಜಿಂಕೆಗಳು,ಹಾಡುಹಕ್ಕಿ, ಲಾಂಗೂರ್ ಮಂಗ, ಘಾರಿಯಲ್ ಹಾಗೂ ಬಾರ್ಬೆಟ್ಟ್ ಗಳು ನಮಗೆ ಗೋಚರವಾದವು. ಬೇರೆಯ ಜೀಪಿನವರು ತಮಗೆ ಹುಲಿ ಕಂಡಿತೆಂದು ಹೇಳಿದರಾದರೂ ನಾವು ಈಗಾಗಲೇ ಸಾಕಷ್ಟು ಬಾರಿ ಪಾರೋಳನ್ನು ಕಂಡು ಒಂದಷ್ಟು ಒಳ್ಳೆಯ ಫೋಟೋಗಳನ್ನು ತೆಗೆದುಕೊಂಡದ್ದರಿಂದ ನಮಗೇನೂ ಅಂತಹ ಬೇಸರವೆನಿಸಲಿಲ್ಲ.

ಊಟದ ನಂತರ, ಬ್ಯಾಗ್ ಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಕಾರ್ಬೆಟ್ಟಿಗೆ ವಿದಾಯ ಹೇಳಲು ಕೊನೆಯ ಸಫಾರಿಗೆ ಹೊರಟು ನಿಂತೆವು. ನದಿದಂಡೆಯ ಬಳಿ ಹೋಗುವಷ್ಟರಲ್ಲಿ ಪಾರೋ ಆಗಲೇ ನೀರಿಗಿಳಿದು ತಂಪಾಗುವ ಸನ್ನಾಹದಲ್ಲಿದ್ದಳು. ಬರೋಬ್ಬರಿ ಮೂವತ್ತು ನಿಮಿಷಗಳ ಕಾಲ ಆ ದೃಶ್ಯವನ್ನು ಕಣ್ತುಂಬಿಕೊಂಡು ರಾಮ್ ನಗರದೆಡೆಗೆ ತಿರುಗಿ ಹೊರಟೆವು. ರಾಮ್ ನಗರದಲ್ಲಿ ಊಟ ಮುಗಿಸಿ ದೆಹಲಿಯ ರೈಲು ಹಿಡಿದು ಸೀಟಿನಲ್ಲಿ ಕುಳಿತಾಗ ಕಳೆದ ನಾಲ್ಕುದಿನದ ಎಲ್ಲ ನೆನಪುಗಳೂ ಒಂದೊಂದಾಗಿ ಸ್ಮೃತಿಪಟಲದ ಮೇಲೆ ಬಂದು ನಿಂತವು.

ದೈತ್ಯಾಕಾರದ ಕಾಡು, ಅದರದ್ದೇ ಆದ ಗಾಂಭೀರ್ಯ, ಅದರೆದುರು ನಿಂತಾಗ ನಮ್ಮಲ್ಲಿ ಮೂಡುವ ಅಲ್ಪತೆ! ಜೊತೆಗೆ ಹೆಗಲಲಿ ನೇತಾಡುವ ಮೆಚ್ಚಿನ ಸಂಗಾತಿ, ವಿಚಾರಗಳನ್ನುಹಂಚಿಕೊಳ್ಳಲು ಸಮಾನ ಮನಸ್ಕರಾದ ಅಷ್ಟು ಗೆಳೆಯರು. ಒಂದು ಅನುಭವವು ಉತ್ಕೃಷ್ಟ ಎಂದು ಹೇಳಲು ಮತ್ತಿನ್ನಾವ ಪ್ರಮಾಣಗಳು ತಾನೇ ಬೇಕಾದೀತು!

ಮೂಲ ಬರಹ: ಸುಧೀಂದ್ರ ರಾವ್
ಕನ್ನಡ ಅನುವಾದ: ಅರುಣ್ ಅಂಚೆ

ನಿಮ್ಮ ಕಾಮೆಂಟ್

Please enter your comment!
Please enter your name here