“ಚಿಟ್ಟೆ” ಎಂಬ ಯಕ್ಷಿಣಿ

0
334

“ಚಿಟ್ಟೆ” ಎಂಬ ಯಕ್ಷಿಣಿಯು ತನ್ನ ಬಣ್ಣಗಳಿಂದ ಸೂರ್ಯನ ಹೊಂಗಿರಣ, ಪುಷ್ಪಭರಿತ ಉದ್ಯಾನ ಹಾಗು ಉಲ್ಲಾಸಭರಿತ ಉಪವನಗಳು ಕೂಡಿದ ಒಂದು ಇಂದ್ರಜಾಲವನ್ನೇ ಸೃಷ್ಟಿಸುತ್ತದೆ.

ಚಿಟ್ಟೆಗಳು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಚಿಟ್ಟೆಗಳು ಮತ್ತು ಸಸ್ಯಗಳ ನಡುವೆ ಮಹತ್ವವಾದ ವಿಕಾಸಾತ್ಮಕ ಸಂಬಂಧವೊಂದಿದೆ. ತಮ್ಮ ಸೌಂದರ್ಯ ಪ್ರದರ್ಶನದಿಂದ ಚಿಟ್ಟೆಗಳು ಹಾರಾಡುವ ಒಡವೆ, ಹಾರಾಡುವ ಹೂವುಗಳು ಎಂದೂ ಕರೆಯಲ್ಪಡುತ್ತವೆ. ಈ ಕೀಟಗಳು ತಮ್ಮ ರೆಕ್ಕೆಗಳ  ಮನೋಹರವಾದ ಬಣ್ಣಗಳಿಂದ ನಮ್ಮ ಸುತ್ತಮುತ್ತಲಿನ ಪರಿಸರದ ಸೌಂದರ್ಯವನ್ನು ವರ್ಧಿಸುತ್ತವೆ. ಚಿಟ್ಟೆಗಳು ಪರಿಸರ ವ್ಯವಸ್ಥೆಯ ವಿಸ್ತೃತ ಸೂಚಕಗಳಾಗಿವೆ; ಈ ಕೀಟಗಳು ಪರಿಸರ ವ್ಯವಸ್ಥೆಯ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿ ಕೊಡುತ್ತವೆ. ಇವುಗಳು ಪರಿಣಾಮಕಾರಿ ಪರಾಗಸ್ಪರ್ಷಕಗಳಾಗಿವೆ, ಚಿಟ್ಟೆಗಳು ಹೂವಿಂದ ಹೂವಿಗೆ ಹಾರಿ ಮಕರಂದ ಹೀರುವುದರಿಂದ, ಇವುಗಳ ಮಧ್ಯೆ ಪರಸ್ಪರ ಪ್ರಯೋಜನಕಾರಿ ಸಂಬಂಧವೊಂದು ಉಂಟಾಗುತ್ತದೆ.

© ರೋಹಿತ್ ಗಿರೋತ್ರ – ಕತ್ತಿ ಬಾಲದ ಚಿಟ್ಟೆ (Spot swordtail)

ಕೆಲವು ಜಾತಿಯ ಚಿಟ್ಟೆಗಳು ಬಹಳ ದೂರ ವಲಸೆ ಹೋಗುತ್ತವೆ; ಅಂತೆಯೇ ತಮ್ಮಲ್ಲಿರುವ ಪರಾಗವನ್ನು ದೂರದಲ್ಲಿರುವ ಮತ್ತೊಂದು ಹೂವಿಗೆ ರವಾನಿಸುತ್ತವೆ.

ಅಂಟಾರ್ಕ್ಟಿಕ ಮತ್ತು ಸಾಗರಗಳನ್ನು ಬಿಟ್ಟರೆ ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ನಾವು ಚಿಟ್ಟೆಗಳನ್ನು ಕಾಣಬಹುದಾಗಿದೆ.

ಮೊನಾರ್ಕ್ ನಂತಹ ಚಿಟ್ಟೆಗಳು ಬಹು ದೂರ ವಲಸೆ ಹೋಗಬಲ್ಲವು. ಕೆಲವೊಮ್ಮೆ ಈ ಚಿಟ್ಟೆಗಳು ಬೇರೆ ಪ್ರಾಣಿ ಪಕ್ಷಿಗಳಿಗೆ ತಾವೇ ಆಹಾರವೂ ಆಗುತ್ತವೆ, ಇದು ಜೈವಿಕ ಕೀಟ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿಟ್ಟೆಗಳ ಸಂಖ್ಯೆಯು ವೇಗವಾಗಿ ಕುಸಿಯುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಕ್ಷಿಪ್ರವಾದ ನಗರೀಕರಣ, ಚಿಟ್ಟೆಗಳ ಸಹಜ ವಾಸಸ್ಥಾನಗಳ ಧ್ವಂಸ, ಅತೀ ಹೆಚ್ಚು ಕೀಟನಾಶಕಗಳ ಬಳಕೆ ಹಾಗೂ ಜನರಲ್ಲಿ ಚಿಟ್ಟೆಗಳ ಮಹತ್ವದ ಬಗ್ಗೆ ಅರಿವಿಲ್ಲದಿರುವುದು. ಚಿಟ್ಟೆಗಳು ತುಂಬಾ ಸೂಕ್ಷ್ಮ ಜೀವಿಗಳಾದ್ದರಿಂದ ಬದಲಾವಣೆಗಳಿಗೆ ಶೀಘ್ರವಾಗಿ ಪ್ರತಿಕ್ರಯಿಸುತ್ತವೆ, ಹೀಗಾಗಿ ಅವುಗಳ ಬದುಕುಳಿಯುವ ಸಂಘರ್ಷ ಪರಿಸರಕ್ಕೆ ಗಂಭೀರವಾದ ಒಂದು ಎಚ್ಚರಿಕೆಯ ಗಂಟೆ.

ಚಿಟ್ಟೆಗಳ ಸಹಜ ವಾಸಸ್ಥಾನಗಳನ್ನು ಬೃಹತ್ ಪ್ರಮಾಣದಲ್ಲಿ ನಾಶಗೊಳಿಸಲಾಗುತ್ತಿದೆ. ತೀವ್ರವಾಗಿ ಆಗುತ್ತಿರುವ ಪರಿಸರೀಯ ಅವನತಿಯಿಂದಾಗಿ ಹವಾಮಾನ ಹಾಗು ವಾತಾವರಣಗಳಲ್ಲಾಗುತ್ತಿರುವ ಅನಿರೀಕ್ಷಿತ ವ್ಯತ್ಯಯಗಳಿಂದ ಈ ನಾಜೂಕು ಕೀಟಗಳು ಕಣ್ಮರೆಯಾಗುತ್ತಿವೆ. ಇದು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಒಂದು ಆತಂಕಕಾರಿ ವಿಷಯವಾಗಿದೆ.

© ರೋಹಿತ್ ಗಿರೋತ್ರ – ಸಾಮಾನ್ಯ ಬೆಳ್ಳಿ ಚಿಟ್ಟೆ (Common Silverline)

ಚಿಟ್ಟೆಗಳನ್ನು ೫ ವರ್ಗಗಳಾಗಿ ವಿಂಗಡಿಸಲಾಗಿದೆ:

 • ಪಾಪಿಲಿಒನಿಡೆ (Papilionidae)

  ಪ್ರವರ್ತಕ ಚಿಟ್ಟೆ(Pioneer ) – © ಸುಧೀಂದ್ರ ರಾವ್
 • ಪಿಎರಿಡೆ (Pieridae)
 • ನಿಮ್ಫಾಲಿಡೆ (Nymphalidae)
 • ಲೈಕಾನಿಡೆ (Lycaenidae)
 • ಹೆಸ್ಪಿರಿಡೆ (Hesperiidae)

ಚಿಟ್ಟೆಗಳ ಜೀವನ ಚಕ್ರದಲ್ಲಿ ಮುಖ್ಯವಾಗಿ ೪ ಹಂತಗಳಿವೆ – ಮೊಟ್ಟೆ, ಲಾರ್ವ (ಚಿಟ್ಟೆಯ ಮರಿ ಹುಳ), ಪೊರೆಹುಳ, ಚಿಟ್ಟೆ.

ಉಷ್ಣವಲಯದ ಕೆಲವು ಜಾತಿಯ ಚಿಟ್ಟೆಗಳು ಒಂದು ವರ್ಷದಲ್ಲಿ ಹಲವಾರು ಪೀಳಿಗೆಗಳನ್ನು ಹುಟ್ಟಿಸಬಲ್ಲವು. ಮತ್ತೆ ಕೆಲವು ಜಾತಿಯ ಚಿಟ್ಟೆಗಳು ವರ್ಷವೊಂದಕ್ಕೆ ಒಂದು ಪೀಳಿಗೆಯನ್ನು ಮಾತ್ರ ಹುಟ್ಟಿಸಬಲ್ಲವು. ಶೀತ ಪ್ರದೇಶದಲ್ಲಿನ ಚಿಟ್ಟೆಗಳಿಗೆ ಒಂದು ಜೀವನ ಚಕ್ರ ಮುಗಿಸಲು ಹಲವಾರು ವರ್ಷಗಳೇ ಬೇಕಾಗುತ್ತದೆ.

ಚಿಟ್ಟೆಗಳು ಪರಭಕ್ಷಕರಿಂದ ಪಾರಾಗಲು ಛದ್ಮವೇಷ, ಅನುಕರಣೆ ಮತ್ತು ಎಚ್ಚರಿಕೆಯ ಸೂಚನೆಗಳನ್ನು ಬಳಸುತ್ತವೆ.

ಕೆಲವು ಅಸಾಧಾರಣ ಚಿಟ್ಟೆಗಳು ಕಾಣಸಿಗುವುದು ತುಂಬಾ ಅಪರೂಪ, ಕೆಲವು ಚಿಟ್ಟೆಗಳ ಗಾತ್ರ ತುಂಬಾ ಸಣ್ಣದಾಗಿರುವುದರಿಂದ ಅವುಗಳನ್ನು ಗುರುತಿಸುವುದು ಕಷ್ಟ.

 • ಅಸಂಬದ್ಧ ನವಾಬ್ ಚಿಟ್ಟೆ (Anomalous Nawab)
 • ಕೆಂಪು ಚುಕ್ಕೆಯ ಚಿಟ್ಟೆ (Redspot)
 • ಕತ್ತಿ ಬಾಲದ ಚಿಟ್ಟೆ (Spot swordtail) –ಈ ಚಿಟ್ಟೆಗಳನ್ನು ಅವು ಪೂರ್ತಿ ಬೆಳೆದ ನಂತರ ಮಾತ್ರ ನೋಡಲು ಸಿಗುತ್ತವೆ. ಇವುಗಳನ್ನು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ (ಫೆಬ್ರವರಿ – ಜೂನ್) ನೋಡಬಹುದು.
 • ಸಾಮಾನ್ಯ ಬೆಳ್ಳಿ ಚಿಟ್ಟೆ (Common Silverline) –ಇದು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು, ಅತಿ ವೇಗವಾಗಿ ಹಾರಬಲ್ಲ ಚಿಟ್ಟೆ.
 • ಹುಲ್ಲಾಭರಣ ಚಿಟ್ಟೆ (Grass Jewel) –ಇದು ಭಾರತದ ಅತಿ ಚಿಕ್ಕದಾದ ಚಿಟ್ಟೆ, ಈ ಚಿಟ್ಟೆ ಕಾಣಸಿಗುವುದು ತುಂಬಾನೇ ಅಪರೂಪ.

ಮೂಲಬರಹ : ರೋಹಿತ್ ಗಿರೋತ್ರ

ರೋಹಿತ್ ರವರು ೨೦ ವರ್ಷಗಳಿಂದ ಐಟಿ ಸಂಸ್ಥೆ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ೭ ವರ್ಷಗಳಿಂದ ಚಿಟ್ಟೆಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ೬ ವರ್ಷಗಳಿಂದ ದೊರೆಸಾನಿಪಾಳ್ಯದ ಅರಣ್ಯ ಪ್ರದೇಶದಲ್ಲಿ ೧೫ ದಿನಗಳಿಗೊಮ್ಮೆ ಚಿಟ್ಟೆ ನಡಿಗೆಯನ್ನು ಆಯೋಜಿಸುತ್ತಾ ಬಂದಿದ್ದಾರೆ.

ಕನ್ನಡ ಅನುವಾದ : ಕಾಡುನಾಡು ತಂಡ

ನಿಮ್ಮ ಕಾಮೆಂಟ್

Please enter your comment!
Please enter your name here