ಛಾಯಾಗ್ರಾಹಕ ಅವಲೋಕಿಸಿದಂತೆ – ಪ್ರಮೋದ್ ಅಂಕದ್

0
1066
© ಪ್ರಮೋದ್ ಅಂಕದ್ – ಟುವ್ವಿ ಹಕ್ಕಿ

ಅಂದು ಪಕ್ಷಿವೀಕ್ಷಣೆಗೆ ಹೆಸರಘಟ್ಟ ಸರೋವರಕ್ಕೆ ತೆರಳಿದೆ. ಹಕ್ಕಿಯೊಂದನ್ನು ಅದರ ಬೇಟೆಯೊಡನೆ ಚಿತ್ರೀಕರಿಸಲು ಮನಸ್ಸಾಗಿತ್ತು, ಆದರೆ ಅಂತಹ ಯಾವುದೇ ಪಕ್ಷಿಯು ಇನ್ನೂ ಸಿಕ್ಕಿರಲಿಲ್ಲ. ಆದರೂ ವಿಶ್ವಾಸ ಕಳೆದುಕೊಳ್ಳದೆ ಸರೋವರದ ಮತ್ತೊಂದು ಬದಿಗೆ ಹೋದೆ. ಅಲ್ಲಿ ಚಂದ್ರಮಕುಟ (Hoopoe) ಹಕ್ಕಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ. ಆ ಛಾಯಾಚಿತ್ರವು ಅಷ್ಟು ಚೆನ್ನಾಗಿ ಬಾರದ ಕಾರಣ ಮತ್ತಷ್ಟು ಅದರ ಚಿತ್ರಗಳನ್ನು ಸೆರೆಹಿಡಿಯಲು ಅದರ ಹಿಂದೆ ಓಡಿದೆ. ದುರಾದೃಷ್ಟವಶಾತ್ ಚಂದ್ರಮಕುಟವು ಅಂದು ಮತ್ತೆ ಸಿಗಲಿಲ್ಲ.

ಅಷ್ಟರಲ್ಲಿ ಮತ್ತೊಂದು ಹಕ್ಕಿಯ ಕೂಗು ಕೇಳಿಸತೊಡಗಿತು. ಒಂದು ಪುಟ್ಟ ಹಕ್ಕಿಯು ಒಂದು ಪೊದೆಯಿಂದ ಇನ್ನೊಂದು ಪೊದೆಗೆ ಅವಿಶ್ರಾಂತವಾಗಿ ಹಾರಾಡುತ್ತಿತ್ತು. ನಾನು ನನ್ನ ಕ್ಯಾಮೆರಾವನ್ನು ಜೂಮ್ ಮಾಡಿ ನೋಡಿದೆ. ಆಗ ಅಲ್ಲಿ ಕಂಡಿದ್ದೇ ಟುವ್ವಿ ಹಕ್ಕಿ (Ashy Prinia), ಅದೂ ಕೂಡ ತನ್ನ ಬೇಟೆಯ ಜೊತೆ. ಯಾವುದೇ ಕಾರಣಕ್ಕೂ ಈ ಅವಕಾಶ ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ೧೦ – ೧೫ ನಿಮಿಷಗಳ ಕಾಲ ತಾಳ್ಮೆಯಿಂದ ಇದ್ದು ಈ ಸುಂದರವಾದ ಚಿತ್ರವನ್ನು ಸೆರೆಹಿಡಿದೆ.

ಟುವ್ವಿ ಹಕ್ಕಿಯು ಒಂದು ಪುಟ್ಟ ಉಲಿಹಕ್ಕಿ. ಇದು ಭಾರತ ಉಪಖಂಡದ ನಿವಾಸಿ ತಳಿಗಾರ ಹಕ್ಕಿಯಾಗಿದ್ದು, ನೇಪಾಳ, ಬಾಂಗ್ಲಾದೇಶ, ಭೂತಾನ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಈ ಹಕ್ಕಿಯನ್ನು ಕಾಣಬಹುದು. ಸಾಮಾನ್ಯವಾಗಿ ಇವನ್ನು ನಗರದ ಉದ್ಯಾನಗಳಲ್ಲಿ ಹಾಗು ಕೃಷಿಭೂಮಿಗಳಲ್ಲಿ ಕಾಣಬಹುದು.

ಟುವ್ವಿ ಹಕ್ಕಿಗಳು ೧೩ – ೧೪ ಸೆಮೀ ಉದ್ದವಿರುತ್ತವೆ. ಇವುಗಳಿಗೆ ಚಿಕ್ಕ ದುಂಡಾದ ರೆಕ್ಕೆಗಳು ಮತ್ತು ಉದ್ದನೆಯ ಕಪ್ಪು ಚುಕ್ಕೆಗಳುಳ್ಳ ಬಾಲವಿರುತ್ತದೆ. ಇವುಗಳ ಶಕ್ತಿಯುತ ಕಾಲುಗಳು ಹತ್ತಿಳಿಯಲು ಮತ್ತು ನೆಲದ ಮೇಲೆ ಜಿಗಿಯಲು ಸಹಕಾರಿಯಾಗಿದೆ. ಇವುಗಳ ಕೊಕ್ಕು ಗಿಡ್ಡವಾಗಿದ್ದು ಕಪ್ಪು ಬಣ್ಣದ್ದಾಗಿದೆ. ಇವುಗಳ ನೆತ್ತಿ ಕಂದು ಬಣ್ಣ ಹಾಗು ಉಳಿದ ರೆಕ್ಕೆಪುಕ್ಕಗಳು ಕೆಂಪು ಬಣ್ಣದ್ದಾಗಿರುತ್ತದೆ.

ಪ್ರಮೋದ್ ಅಂಕದ್

ನಿಮ್ಮ ಕಾಮೆಂಟ್

Please enter your comment!
Please enter your name here