ನೀರಿಗಾಗಿ ಅರಣ್ಯ – ಬೆಂಗಳೂರಿನ ಹೆಣ್ಣೂರು ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ – ೨೦೧೭ ರ ಸವಿ ನೆನೆಪ್ಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೇವೆ

0
175

ಬೆಂಗಳೂರಿನಂತಹ ಮಹಾ ನಗರಿಯ ವಾತಾವರಣದ ಬಗ್ಗೆ ಒಂದು ಕಾಲದಲ್ಲಿ ವಿಶೇಷಣಗಳು ಕೇಳಿಬರುತ್ತಾ ಇತ್ತು, ಬೆಂಗಳೂರು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ ಎಂದು. ಆದರೆ ಈಗ ಆ ವಾತಾವರಣ ಇಲ್ಲ, ಆಧುನೀಕರಣದ ಭರದಲ್ಲಿ ನಾವು ಮರಗಳನ್ನು ಕಡಿದು ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ, ಬೆಂಗಳೂರಿನ ವಾತಾವರಣವನ್ನೇ ಬದಲಾಯಿಸಿ ಬಿಟ್ಟಿದ್ದೇವೆ.

ಬೆಂಗಳೂರಿನಲ್ಲಿ ಜನರಿಗೆ ಶುದ್ಧವಾದ ಗಾಳಿ ಕೆಲವೇ ಕೆಲವು ಜಾಗಗಳಲ್ಲಿ ಉಳಿದುಕೊಂಡಿದೆ, ಅದರಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಪ್ರಮುಖವಾಗಿ ಕೇಳಿ ಬರುವ ಹೆಸರು. ಅದೇ ವಿಭಾಗಕ್ಕೆ ಸೇರುವ ಇನ್ನೊಂದು ಹೆಸರು “ಹೆಣ್ಣೂರು ಬಯೋ ಡೈವರ್ಸಿಟಿ ಪಾರ್ಕ್”. ಕರ್ನಾಟಕ ಅರಣ್ಯ ಇಲಾಖೆಯ ದಕ್ಷ ಅಧಿಕಾರಿ ಶ್ರೀಮತಿ ದೀಪಿಕ ಬಾಜಪೇಯಿಯವರ ಸಾರಥ್ಯದಲ್ಲಿ ೩೪ ಎಕರೆಯ, ಬೆಂಗಳೂರಿನ ಮೂರನೇ ದೊಡ್ಡ ಪಾರ್ಕ್, ಮರ, ಗಿಡ, ಕೃತಕ ಕೆರೆಗಳಿಂದ ಕಂಗೊಳಿಸುತ್ತಿದೆ. ಜೂನ್ ೧೧, ೨೦೧೭ ರಂದು ಇಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಈ ವರ್ಷದ ಘೋಷ ವಾಕ್ಯ “ನೀರಿಗಾಗಿ ಅರಣ್ಯ”.

ಕರ್ನಾಟಕದ ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ ರವರು ಮಾವಿನ ಗಿಡ ನೆಡುವ ಮೂಲಕ, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈಗಾಗಲೇ ಸರಕಾರ ಘೋಷಿಸಿದ ೫ ಕೋಟಿ ರೂಪಾಯಿಯಲ್ಲಿ ಸುಮಾರು ೨ ಕೋಟಿ ರೂಪಾಯಿ ಈಗಾಗಲೆ ಹೆಣ್ಣೂರು ಬಯೋ ಡೈವರ್ಸಿಟಿ ಪಾರ್ಕ್ ಗೆ ಸಂದಾಯ ವಾಗಿದೆ, ಇನ್ನು ಉಳಿದ ಹಣ ಶೀಘ್ರದಲ್ಲೇ ಸಂದಾಯ ಮಾಡುವುದಾಗಿ ಭರವಸೆ ನೀಡಿದರು.

ಅಲ್ಲಿ ನೆರೆದಿದ್ದ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲಾ ಮಕ್ಕಳು ಕನಿಷ್ಠ ಪಕ್ಷ ಒಂದು ಸಸಿ ನೆಟ್ಟು, ಅದರ ಪೋಷಣೆ ಮಾಡಬೇಕೆಂದು ಹೇಳಿದರು. ಸಭಾ ಕಾರ್ಯಕ್ರಮ ಮುಗಿದ ಮೇಲೆ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು, ಸುತ್ತ ಮುತ್ತಲಿನ ಸರಕಾರಿ ಮತ್ತು ಖಾಸಗಿ ಶಾಲೆಯ ಸುಮಾರು ೧೦೦ ಮಕ್ಕಳು ಭಾಗವಹಿಸಿದ್ದರು. ಚಿತ್ರ ಬಿಡಿಸುವ ವಿಷಯ “ನೀರಿಗಾಗಿ ಅರಣ್ಯ”, ಇದರಲ್ಲಿ ಅತ್ಯುತ್ತಮವಾಗಿ ಚಿತ್ರ ಬಿಡಿಸಿದ ೫ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ದೊಡ್ಡವರಿಗಾಗಿ ಚಿಟ್ಟೆ ನಡಿಗೆ (Butterfly walk) ಏರ್ಪಡಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಖ್ಯಾತ ಚಿಟ್ಟೆ ತಜ್ಞರಾದ ಅಶೋಕ್ ಸೇನ್ ಗುಪ್ತ, ಗಿರೀಶ್ ಕುಮಾರ್ ಜಿ ಎಸ್ ಮತ್ತು ಮೋಹನ್ ಪ್ರಶಾಂತ್ ರವರು ಚಿಟ್ಟೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು, ಚಿಟ್ಟೆ ನಡಿಗೆ ಮಾಡುತ್ತಾ ಸುಮಾರು ಹತ್ತು ಬಗೆಯ ಚಿಟ್ಟೆಗಳನ್ನು ಗುರುತಿಸಲಾಯಿತು—ಕಾಮನ್ ಅವ್ಳ್ (common awl), ಡಾರ್ಕ್ ಸೆರುಲಿಯನ್ (Dark Cerulean), ಗ್ರಾಸ್ ಯಲ್ಲೋ (Grass Yellow), ಪ್ಲೈನ್ ಟೈಗರ್ (Plain Tiger), ಕಾಮನ್  ಸೆರುಲಿಯನ್ (Common Cerulean), ಕಾಮನ್ ಕಾಸ್ತೋರ್ (Common Castor), ಕಾಮನ್ ಮಾರ್ಮನ್ (Common Mormon), ಇಂಡಿಯನ್ ಓಕ್ ಬ್ಲೂ (Indian Oak Blue) ಲೆಮನ್ ಪ್ಯಾನ್ಸಿ (Lemon Pansy) ಮತ್ತು ಬ್ಲೂ ಪ್ಯಾನ್ಸಿ (Blue Pansy).

ಆ ದಿನದ ಮತ್ತೊಂದು ವಿಶೇಷ, ಕರ್ನಾಟಕ ಅರಣ್ಯ ಇಲಾಖೆ ಕೇವಲ ೩ ರೂಪಾಯಿಗೆ ಒಂದು ಸಸಿ ಮಾರಾಟ ಮಾಡುತ್ತಿದ್ದರು, ಕಾರ್ಯಕ್ರಮಕ್ಕೆ ಬಂದವರೆಲ್ಲರು ೩ – ೪ ಸಸಿ ಕೊಂಡು ಕೊಂಡರು.

ಭಾರತೀಯ ಅಂಚೆ ಇಲಾಖೆಯವರು ಬಯೋ ಡೈವರ್ಸಿಟಿ ಪಾರ್ಕ್ ಒಳಗೆ ಇರುವ “ಜೀವ ವೈವಿಧ್ಯ ಮಾಹಿತಿ ಕೇಂದ್ರ” ದಲ್ಲಿ ಅಂಚೆ ಚೀಟಿ ಪ್ರದರ್ಶನ ಹಾಗು ಮಾರಾಟದ ವ್ಯವಸ್ಥೆ ಮಾಡಿದ್ದರು, ಅಲ್ಲಿ ದೇಶ ವಿದೇಶಗಳ, ಪರಿಸರದ, ಪ್ರಾಣಿ, ಪಕ್ಷಿಗಳ ಅಂಚೆ ಚೀಟಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು .

ಈ ಒಂದು ಕಾರ್ಯಕ್ರಮ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಉಂಟುಮಾಡುವಲ್ಲಿ ಯಶಸ್ವಿಯಾಯಿತು.

ಪರಿಸರದ ಜೊತೆ ಸ್ವಲ್ಪ ಸಮಯ ಕಳೆಯುವ ಒಂದು ಸುಯೋಗ ಒದಗಿಸಿದ ಕರ್ನಾಟಕ ಅರಣ್ಯ ಇಲಾಖೆಯವರಿಗೆ “ಕಾಡುನಾಡು” ವತಿಯಿಂದ ಧನ್ಯವಾದಗಳು.

ನಿಮ್ಮ ಕಾಮೆಂಟ್

Please enter your comment!
Please enter your name here