ಸಂಚಿಕೆ – ೨ – ಸಂಚಿಕೆಯ ಛಾಯಾಗ್ರಾಹಕರು – ಶ್ರೀ ಅನಂತ ಮೂರ್ತಿ

0
1462

ಈ ಸಂಚಿಕೆಯ ಛಾಯಾಗ್ರಾಹಕರು ಶ್ರೀ ಅನಂತ ಮೂರ್ತಿ.

ಇವರು ಹುಟ್ಟಿದ್ದು ಬೆಂಗಳೂರಿನ ಜಯನಗರದಲ್ಲಿ, ಬೆಳೆದಿದ್ದು ರಾಜಾಜಿನಗರದಲ್ಲಿ, ಈಗ ನೆಲೆಸಿರುವುದು ಜೆ ಪಿ ನಗರದಲ್ಲಿ. ಇವರ ತಂದೆ ದಿವಂಗತ ಶ್ರೀ ರಾಮಪ್ಪ, ಚಿಕ್ಕಬಳ್ಳಾಪುರದವರು ಹಾಗು ತಾಯಿ ದಿವಂಗತ ಶ್ರೀಮತಿ ಸರೋಜಾ ರಾಮಪ್ಪ, ಶಿವಮೊಗ್ಗದವರು.

ಮೂರ್ತಿಯವರು ಪ್ರಸ್ತುತ LIC ಯಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿ ೩೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಕಲಾ ಅನಂತ ಮೂರ್ತಿ, ಶಿಶುವಿಹಾರವೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಗ ರಾಹುಲ್ ಕೌಂಡಿನ್ಯ, ೨ನೇ ವರ್ಷದ BBM ಓದುತ್ತಿದ್ದಾರೆ.

ಅನಂತ ಮೂರ್ತಿಯವರು ಒಬ್ಬ ಪ್ರಾಜ್ಞ ಛಾಯಾಗ್ರಾಹಕರಾಗಿದ್ದು, ಪಕ್ಷಿಗಳ ಮೇಲೆ ಅತೀವ ಒಲವು ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಕೇವಲ ಭೂದೃಶ್ಯ ಹಾಗು ದೇವಸ್ತಾನಗಳ ವಾಸ್ತುಶಿಲ್ಪ ಛಾಯಾಗ್ರಹಣ ಮಾಡುತ್ತಿದ್ದ ಇವರಿಗೆ, ನಾನೊಂದು ದಿನ ಖ್ಯಾತ ವನ್ಯ ಜೀವಿ ಛಾಯಾಗ್ರಾಹಕನಾಗುತ್ತೇನೆ ಎಂಬ ಕಲ್ಪನೆ ಸಹ ಇರಲಿಲ್ಲ. ತಮ್ಮ ಛಾಯಾಗ್ರಹಣದ ಪಯಣವನ್ನು ಅವರು ಈ ರೀತಿಯಾಗಿ ನಮ್ಮೊಂದಿಗೆ ಹಂಚಿಕೊಂಡರು.

 

© ಅನಂತ ಮೂರ್ತಿ

ನಾನು PUC ಓದುತ್ತಿರುವಾಗಲೇ ಕೆಲಸ ಮಾಡಲು ಶುರು ಮಾಡಿದೆ. ಮೈಸೂರ್ ಸೋಪ್ ಕಾರ್ಖಾನೆಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ತಂಡವೊಂದನ್ನು ಮಾಡಿದ್ದರು, ಅಲ್ಲಿ ನಾನು ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡಲಾರಂಭಿಸಿದೆ.  ಪ್ರತಿ ತಿಂಗಳು ೬೦ ರೂಪಾಯಿ ಸಂಪಾದಿಸುತ್ತಿದ್ದೆ. ಬೆಳಿಗ್ಗೆ ಕಾಲೇಜ್ ಮುಗಿಸಿ, ಮಧ್ಯಾಹ್ನ ೨ ರಿಂದ ೬ ಗಂಟೆಯವರೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಂದಿನಿಂದ ಇಂದಿನವರೆಗೂ ಒಂದು ದಿನವೂ ವಿಶ್ರಮಿಸಲಿಲ್ಲ. ಜೀವನದ ಎಲ್ಲಾ ಬದ್ದತೆಗಳನ್ನು ನಿರ್ವಹಿಸುತ್ತಾ ಬಂದೆ. ನನಗೆ ೫೦ ವರ್ಷಗಳಾದಾಗ ನನ್ನ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎಂದೆನಿಸಿದ ನಂತರ, ಈಗ ನನಗಾಗಿ ನಾನೇನಾದರೂ ಸಾಧನೆ ಮಾಡಲೇಬೇಕೆಂಬ ಮನಸ್ಸಾಯಿತು. ಹೀಗೆ ನನಗೆ ೫೦ ವರ್ಷಗಳಾದ ನಂತರ ವನ್ಯ ಜೀವಿ ಛಾಯಾಗ್ರಹಣವನ್ನು ಹವ್ಯಾಸವಾಗಿ ಶುರು ಮಾಡಿಕೊಂಡೆ.

© ಅನಂತ ಮೂರ್ತಿ – ಕಂದುರೆಕ್ಕೆ ಮಿಂಚುಳ್ಳಿ
© ಅನಂತ ಮೂರ್ತಿ – ಸಣ್ಣಕೊಂಬಿನ ಗೂಬೆ

೨೦೧೧ರಲ್ಲಿ ನನ್ನ ಗೆಳೆಯನಾದ ಅರುಣ್ ನನಗೆ ಪ್ರಖ್ಯಾತ ಛಾಯಾಗ್ರಾಹಕರಾದ ಸುರೇಶ್ ಬಸವರಾಜುರವರನ್ನು ಪರಿಚಯ ಮಾಡಿಸಿದರು. ಅಂದಿನಿಂದ ಸುರೇಶ್ ನನಗೆ ಛಾಯಾಗ್ರಹಣದ ಗುರುವಾದರು.

‘ಇಂಡಿಯಾ ನೇಚರ್ ವಾಚ್’ ಜಾಲತಾಣದಲ್ಲಿ ಬೆಂಗಳೂರಿನಲ್ಲಿರುವ ಪಕ್ಷಿಗಳ ಛಾಯಾಚಿತ್ರಗಳನ್ನು ನೋಡಿ, ಇಷ್ಟೊಂದು ಬಗೆಯ ಪಕ್ಷಿಗಳು ಬೆಂಗಳೂರಿನಲ್ಲಿವೆಯೇ ಎಂದು ತುಂಬಾ ಆಶ್ಚರ್ಯವಾಯಿತು. ಇವುಗಳ ಬಗ್ಗೆ ಕಲಿಯಬೇಕೆಂದು ಮನಸ್ಸು ಮಾಡಿ ನನ್ನಲ್ಲಿದ್ದ ಕ್ಯಾಮೆರಾ ತೆಗೆದುಕೊಂಡು ಸುರೇಶ್ ರವರ ಬಳಿ ಹೋದೆ. ಅಂದು ಭಾನುವಾರ, ಹೇಸರಘಟ್ಟಕ್ಕೆ ಹೊರಟೆವು. ಅಲ್ಲಿ ಮೊಟ್ಟಮೊದಲ ಬಾರಿಗೆ ದಾಸ ಮಗರೆ ಪಕ್ಷಿ ನೋಡಿದ ನಾನು ಚಿಕ್ಕ ಮಗುವಿನಂತೆ ಸಂಭ್ರಮಿಸಿದೆ, ೨೦೦ ರಿಂದ ೩೦೦ ಫೋಟೋಗಳನ್ನು ಕ್ಲಿಕ್ಕಿಸಿದೆ.

ಫೋಟೋಗಳನ್ನು ತೆಗೆದ ಮೇಲೆ ಅದರ ಪರಿಷ್ಕರಣೆ ತುಂಬಾ ಮುಖ್ಯ. ನನಗೆ ಕಂಪ್ಯೂಟರ್ ಬಳಕೆ ಮಾಡಿ ಅಭ್ಯಾಸ ಇರಲಿಲ್ಲ. ಸುರೇಶ್ ರವರೇ ಕ್ರಮವಾಗಿ ಕಂಪ್ಯೂಟರ್ ಬಳಕೆ ಹಾಗು ಫೋಟೋಗಳ ಪರಿಷ್ಕರಣೆ ಹೇಳಿಕೊಟ್ಟರು.

ಆನಂತರ ನಾನು ಸ್ನೇಹಿತರೊಡನೆ ಕಬಿನಿಗೆ ಹೋದೆ. ಅಲ್ಲೇ ನಾನು ಮೊದಲ ಬಾರಿಗೆ ಹುಲಿಯನ್ನು ಕಂಡೆ. ಚೊಟ್ಟಿ ಗಿಡುಗ (Crested hawk eye eagle) ಕೂಡ ನೋಡಿದೆ. ಈ ಪಕ್ಷಿಯು ಇವತ್ತಿಗೂ ಕೂಡ ನನ್ನ ಅಚ್ಚುಮೆಚ್ಚಿನ ಪಕ್ಷಿಗಳಲ್ಲಿ ಒಂದು.

© ಅನಂತ ಮೂರ್ತಿ – ಹುಲಿ

ನಂತರದ ದಿನಗಳಲ್ಲಿ ನಾನು ಅತ್ಯಾಧುನಿಕ ಕ್ಯಾಮೆರಾ ಉಪಕರಣಗಳನ್ನು ಖರೀದಿಸಿದೆ.

ನಾನು ಮುಂದಿನ ಪ್ರಯಾಣ ಕೈಗೊಂಡಿದ್ದು ಭರತಪುರಕ್ಕೆ. ಇದು ನಾನು ಒಬ್ಬಂಟಿಯಾಗಿ ಹೋದ ಪ್ರವಾಸ. ಈ ಪ್ರವಾಸದಲ್ಲಿ ನಾನು ಕ್ಯಾಮೆರಾ ಬಳಸುವ ಸಾಕಷ್ಟು ರೀತಿ ಹಾಗು ವಿಧಾನಗಳನ್ನು ಕಲಿತುಕೊಂಡೆ. ಇದಾದ ಮೇಲೆ ಸತ್ತಾಲ್ ಪ್ರವಾಸವನ್ನೂ ಮುಗಿಸಿದೆ.

ಈ ಹೊತ್ತಿಗೆ ನಾನು ಇನ್ನಷ್ಟು ಆಧುನಿಕ ಕ್ಯಾಮೆರಾ ಉಪಕರಣಗಳನ್ನು ಖರೀದಿಸಿ ಗಂಭೀರ ಛಾಯಾಗ್ರಹಣಕ್ಕೆ ಸಜ್ಜಾದೆ.

ಕಾರ್ಬೆಟ್, ಗಣೇಶಗುಡಿ, ಚೆನ್ನೈ, ತಡೋಬ, ಕಾಜಿರ೦ಗಾ, ರಾಜಸ್ತಾನ್, ಗುಜರಾತ್ ಹೀಗೆ ಸಾಕಷ್ಟು ಪ್ರವಾಸಗಳನ್ನು ಕೈಗೊಂಡೆ. ತಡೋಬಾನಲ್ಲಿ ಕಂಡ ಹುಲಿಗಳನ್ನು ನಾನು ಇಂದಿಗೂ ಮರೆಯಲು ಸಾಧ್ಯವೇ ಇಲ್ಲ.

೨೦೧೪ ರಲ್ಲಿ ಮೊದಲ ಬಾರಿಗೆ ನಾನು ಮಸೈ ಮಾರಾಗೆ ಹೋದೆ. ಅದೊಂದು ಅದ್ಭುತ ಅನುಭವ, ಬೇರೆಯದೇ ಪ್ರಪಂಚ.

ನಾನು ತೆಗೆದ ಹಲವಾರು ಛಾಯಾಚಿತ್ರಗಳು ‘ಬಾಂಬೆ ನಾಚುರಲ್ ಹಿಸ್ಟರಿ ಸೊಸೈಟಿ’ಯಲ್ಲಿ ಪ್ರಕಟವಾಗಿವೆ. ಇನ್ನು ಕೆಲವು ಚಿತ್ರಗಳು ಹಾರೈಕೆಯೋಲೆಗಳಲ್ಲಿ ಮುದ್ರಿತವಾಗಿವೆ. ‘ಮಹಾರಾಷ್ಟ್ರ ಬರ್ಡ್ ಬುಕ್’ನಲ್ಲಿ ನನ್ನ ಎರಡು ಛಾಯಾಚಿತ್ರಗಳು ಮುದ್ರಿತವಾಗಿವೆ – ಓಸ್ಪ್ರೆ(osprey) ಮತ್ತು ಬೂದಿ ತಲೆಯ ಗರುಡ (Grey headed fish eagle). ಈ ಪುಸ್ತಕವು ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಮುದ್ರಿತವಾಗಿದೆ. ಇಷ್ಟೇ ಅಲ್ಲದೆ ನನ್ನ ಛಾಯಾಚಿತ್ರಗಳು ‘NGC ಟ್ರಾವೆಲ್ಲರ್’ ಹಾಗು ‘ವೈಲ್ಡ್ ಬರ್ಡ್ ಟ್ರಸ್ಟ್’ ಗಳಲ್ಲಿಯೂ ಕೂಡ ಪ್ರಕಟವಾಗಿವೆ.

© ಅನಂತ ಮೂರ್ತಿ

ನಾನು ಈಗ ಸರಿಸುಮಾರು ೧೦೦೦ ಜಾತಿಯ ಪಕ್ಷಿಗಳನ್ನು ಗುರುತಿಸಬಲ್ಲೆ. ಅದರಲ್ಲಿ ೬೦೦ ಜಾತಿಯ ಭಾರತದ ಪಕ್ಷಿಗಳು ಹಾಗು ೧೫೦ ಜಾತಿಯ ಆಫ್ರಿಕಾದ ಪಕ್ಷಿಗಳು. ಈ ಹವ್ಯಾಸವು ನನ್ನನ್ನು ೨೦ ವರ್ಷ ಕಿರಿಯನನ್ನಾಗಿ ಮಾಡಿದೆ.

೨೦೧೭ ರ ಫೆಬ್ರವರಿಯಲ್ಲಿ ಹಿಮ ಚಿರತೆಯನ್ನು ಹುಡಿಕಿಕೊಂಡು ಹಿಮಾಲಯಕ್ಕೆ ಹೋಗಿದ್ದೆ. ಹವಾಮಾನ ವೈಪರೀತ್ಯದಿಂದ ಉಸಿರಾಡಲೂ ತುಂಬಾ ಕಷ್ಟ ಪಡಬೇಕಾದ ಪರಿಸ್ಥಿತಿಯಲ್ಲೂ ಹಿಮ ಚಿರತೆಯನ್ನು ಕಂಡು ಬಂದೆನಲ್ಲ ಎಂಬ ಸಂತೃಪ್ತಿ ನನಗಿದೆ. ನನ್ನ ಪ್ರಕಾರ ಇದು ನನ್ನ ಜೀವನದ ಅತಿ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ನನ್ನ ಕೈ ಬೆರಳುಗಳು ಚಳಿಯಿಂದ ಕಂದು ಬಣ್ಣಕ್ಕೆ ತಿರುಗಿದ್ದು, ಇನ್ನೂ ಸಹ ಹಾಗೆಯೇ ಇದೆ. ರೆಡ್ ಪಾಂಡಾ ಸಿಗಲಿಲ್ಲ ಎಂಬ ಬೇಸರ ಇದ್ದೇ ಇದೆ. ಆದರೆ ರೆಡ್ ಪಾಂಡಾ ಹುಡಿಕಿಕೊಂಡು ನಾನು ಮತ್ತೆ ಹಿಮಾಲಯಕ್ಕೆ ಹೋಗುವುದಂತೂ ಖಂಡಿತ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಹಿಮಾಲಯವನ್ನು ನೋಡದವನು ಸಂಪೂರ್ಣ ಭಾರತೀಯನೇ ಅಲ್ಲ.

ಖಡ್ಗಮೃಗ – © ಅನಂತ ಮೂರ್ತಿ

ಇಂದಿನ ಯುವಕರಿಗೆ ನಾನು ಹೇಳುವುದಿಷ್ಟೇ, ವನ್ಯ ಜೀವಿ ಛಾಯಾಗ್ರಹಣವನ್ನು ಹವ್ಯಾಸವನ್ನಾಗಿ ಬೆಳೆಸಿಕೊಳ್ಳಿ, ಆದರೆ ಅದರಲ್ಲೇ ಜೀವನ ನಡೆಸುತ್ತೇನೆ ಎಂಬ ನಿರ್ಧಾರಕ್ಕೆ ಬರುವ ಮುನ್ನ ಸ್ವಲ್ಪ ಯೋಚಿಸಿ. ಈ ಉದ್ಯಮದಲ್ಲಿ ಹಣ ಸಂಪಾದನೆ ತುಂಬಾ ಕಷ್ಟ. ಹಾಗಾಗಿ ಈ ಹವ್ಯಾಸವನ್ನು ಮುಖ್ಯ ಉದ್ಯೋಗವನ್ನಾಗಿ ಮಾಡುವ ಆಲೋಚನೆ ಮಾಡದೆ ಇರುವುದೇ ಒಳಿತು. ಇನ್ನು ವನ್ಯ ಜೀವಿ ಸಂರಕ್ಷಣೆಯ ವಿಷಯಕ್ಕೆ ಬಂದರೆ, ಈಗಿನ ಪೀಳಿಗೆ ಸಂರಕ್ಷಣೆಯನ್ನು ಕೇವಲ ಫೇಸ್ಬುಕ್, ಟ್ವಿಟ್ಟರ್ ಗಳಲ್ಲಿ ಮಾತ್ರ ಮಾಡಿದರೆ ಸಾಕೆಂದು ಕೊಂಡಿದ್ದಾರೆ. ಸಂರಕ್ಷಣೆಯ ಕಾರ್ಯವನ್ನು ನಾವು ಸಂರಕ್ಷಣಾ ತಜ್ಞರಿಗೆ ಬಿಟ್ಟುಬಿಡುವುದೇ ಒಳಿತು.

ನಮ್ಮ ಫೇಸ್ಬುಕ್ ಗ್ರೂಪ್ ‘ವೈಲ್ಡ್ಲೈಫ್ ಆಕ್ಷನ್ ಫೋಟೋಗ್ರಫಿ’ ಯ ಮೂಲಕ ನಾವು ಛಾಯಾಗ್ರಹಣ ತರಬೇತಿ ಶಿಬಿರಗಳು ಹಾಗು ಪ್ರವಾಸಗಳನ್ನು ಆಯೋಜಿಸುತ್ತೇವೆ. ಹಾಗೆಯೇ ಹಲವಾರು ಛಾಯಾಚಿತ್ರ ಸ್ಫರ್ಧೆಗಳನ್ನು ಏರ್ಪಡಿಸುತ್ತೇವೆ.

ಭವಿಷ್ಯದಲ್ಲಿ ಪಕ್ಷಿಗಳ ಬಗ್ಗೆ ಒಂದು ಪುಸ್ತಕವನ್ನು ಬಿಡುಗಡೆ ಮಾಡುವ ಅಭಿಲಾಷೆ ಹೊಂದಿದ್ದೇನೆ.

ಮೂರುಬೆರಳಿನ ಮಿಂಚುಳ್ಳಿ – © ಅನಂತ ಮೂರ್ತಿ

ಅನಂತ ಮೂರ್ತಿಯವರ ಭವಿಷ್ಯದ ಯೋಜನೆಗಳಿಗೆ ಕಾಡುನಾಡು ತಂಡದ ವತಿಯಿಂದ ಶುಭ ಹಾರೈಸುತ್ತೇವೆ

ನಿಮ್ಮ ಕಾಮೆಂಟ್

Please enter your comment!
Please enter your name here