ಆಗುಂಬೆ – ನಿತ್ಯ ಹರಿದ್ವರ್ಣ ಕಾಡು

0
805

ದಣಿವಿನಿಂದ ಆಕಾಶದತ್ತ ನೋಡುತ್ತಿರುವ ಭೂಮಿ ತಾಯಿ. ಚಲಿಸುವ ಮೋಡಗಳನ್ನು ಸೆರೆ ಹಿಡಿದು ಮಳೆ ಸುರಿಸಿ ಭೂಮಿ ತಾಯಿಯ ದಣಿವಾರಿಸುತ್ತಿರುವ ನಿತ್ಯ ಹರಿದ್ವರ್ಣ ಕಾಡುಗಳು. ಇಂತಹದೊಂದು ಕಾಡು, ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರುವಾಸಿಯಾದ ಆಗುಂಬೆಯ ಕಾಡು.

© ಸುಧೀಂದ್ರ ರಾವ್

ಪಶ್ಚಿಮ ಘಟ್ಟದ ಅವಿಭಾಜ್ಯ ಅಂಗವಾಗಿರುವ ಆಗುಂಬೆಯು ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದೆ. ಅರಬ್ಬೀ ಸಮುದ್ರದಿಂದ ಸರಿಸುಮಾರು ೧೦೦ ಕಿಮೀ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ ೬೭೩ ಮೀ ಎತ್ತರದಲ್ಲಿದೆ. ಆಗುಂಬೆಯು ಉಷ್ಣವಲಯದ ಹವಾಮಾನ ಹೊಂದಿದೆ. ಇಲ್ಲಿ ವರ್ಷವೊಂದಕ್ಕೆ ಅಂದಾಜು ೩೦೦ ಅಂಗುಲ ಮಳೆಯಾಗುತ್ತದೆ. ಆಗುಂಬೆಯ ಈ ಪರಿಸರವು ಅನೇಕ ಜೀವವೈವಿಧ್ಯಗಳಿಗೆ ನೆರವಾಗಿದೆ. ಆಗುಂಬೆಯಲ್ಲಿ ಬಹಳಷ್ಟು ಅಪರೂಪದ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳನ್ನು ಕಾಣಬಹುದು. ಅಷ್ಟೇ ಅಲ್ಲದೆ ಅನೇಕ ಜಾತಿಯ ಸರೀಸೃಪಗಳು, ಉಭಯಚರಗಳು ಹಾಗೂ ರಂಗುರಂಗಿನ ಕ್ರಿಮಿ ಕೀಟಗಳಿಗೆ ಆಗುಂಬೆಯು ತವರು ಮನೆಯಾಗಿದೆ.

ಅಳಿವಿನಂಚಿನಲ್ಲಿರುವ ಕಾಳಿಂಗ ಸರ್ಪಗಳ (King Cobra) ರಾಜಧಾನಿಯೆಂದೇ ಆಗುಂಬೆಯು ಹೆಸರುವಾಸಿಯಾಗಿದೆ. ಕಾಳಿಂಗ ಸರ್ಪವನ್ನೊಳಗೊಂಡು ಆಗುಂಬೆಯಲ್ಲಿ ಕೆಳಕಂಡ ೨೦ ಬೇರೆಬೇರೆ ಬಗೆಯ ಹಾವುಗಳನ್ನು ಇದುವರೆಗೆ ದಾಖಲಿಸಲಾಗಿದೆ.

ಕಾಳಿಂಗ ಸರ್ಪ – © ಸುಹಾಸ್ ಪ್ರೇಮ್ ಕುಮಾರ್

ಹಾವುಗಳ ಪಟ್ಟಿ

ಹಪ್ಪಾಟೆ ಹಾವು – © ರಂಜಿತ್ ರಾಫೆಲ್
 • ಮಲೆ ಮಂಡಲ ಹಾವು ಅಥವ ಹಪ್ಪಾಟೆ ಹಾವು (Malabar Pit Viper)
 • ಉಬ್ಬು ಮೂಗಿನ ಮಂಡಲದ ಹಾವು (Hump Nosed Pit Viper)
 • ಬಿದಿರು ಮಂಡಲದ ಹಾವು (Bamboo Pit Viper)
 • ಕುದುರೆ ಲಾಳ ಮಂಡಲದ ಹಾವು (Horseshoe Pit Viper)
 • ದೊಡ್ಡ ಪಟ್ಟೆಯ ಮಂಡಲದ ಹಾವು (Large Scaled Pit Viper)
 • ಕುಕ್ರಿ ಹಾವು (Banded Kukri)
 • ಗುಂತರ್ ಬಳ್ಳಿ ಹಾವು (Green Vine Snake)
 • ತೊಗಟೆ ಹಾವು (Montane Trinket Snake)
 • ಬೆನ್ನೆಣು ಹಾವು (Wayanad keelback)
 • ಟ್ರಾವೆಂಕೋರ್ ತೋಳದ ಹಾವು (Travancore Wolf Snake)
 • ಬೆಕ್ಕಿನ ಹಾವು (Beddome’s Cat Snake)
 • ಗುರಾಣಿ ಹಾವು (Khaire’s Black Shieldtail)
 • ಮರದ ಹಾವು (Giri’s Bronzeback Tree Snake)
 • ಕೇರೆ ಹಾವು (Indian Rat Snake)
 • ಹೆಬ್ಬಾವು (India Rock Python)
 • ನಾಗರ ಹಾವು (Indian Cobra)
 • ಕೊಳಕು ಮಂಡಲ (Russell’s Viper)
 • ಗರಗಸ ಮಂಡಲದ ಹಾವು (Saw Scaled Viper)
 • ಕಟ್ಟು ಹಾವು (Indian Krait)

ಈ ಹಾವುಗಳಿಗೆ ಆಹಾರವಾಗಲೆಂದೇ ಆಗುಂಬೆಯು ಕಪ್ಪೆಗಳ ವೈವಿಧ್ಯಮಯ ಸಾಮ್ರಾಜ್ಯವನ್ನೇ ತನ್ನೊಳಗೆ ಅಡಗಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಕಪ್ಪೆಗಳು ಬಾಲರಹಿತ ಉಭಯಚರಗಳಾಗಿವೆ. ಆಗುಂಬೆಯಲ್ಲಿ ಹಲವಾರು ಜಾತಿಯ ಕಪ್ಪೆಗಳನ್ನು ಕಾಣಬಹುದು.

ಕೆಲವು ಕಪ್ಪೆಗಳ ಪಟ್ಟಿ

ಅಂಬೋಲಿ ಪೊದೆ ಕಪ್ಪೆ – © ಸುಧೀಂದ್ರ ರಾವ್
 • ಮಲಬಾರ್ ಜಾರು ಕಪ್ಪೆ (Malabar Gliding Frog- Rhacophorus Malabaricus)
 • ಮಾರ್ಬಲ್ಡ್ ರಾಮನೆಲ್ಲಾ ಕಪ್ಪೆ
 • ಅಂಬೋಲಿ ಪೊದೆ ಕಪ್ಪೆ (Amboli Bush Frog)
 • ಸಾಮಾನ್ಯ ಭಾರತೀಯ ಕಾಡುಗಪ್ಪೆ (Common India Toad- Duttaphrynus melanostictus)
 • ರುಫೋಸ್ ಕ್ರಿಕೆಟ್ ಕಪ್ಪೆ (Rufous Cricket Frog)
 • ಗೂಳಿ ಕಪ್ಪೆ (Bull frog)
 • ಬಿಲ ಕಪ್ಪೆ (Burrowing Frog)
 • ಮರಗಪ್ಪೆ (Tree Frog)
 • ವೇನಾಡ್ ಪೊದೆ ಕಪ್ಪೆ (Pseudophilautus wynaadensis)
 • ದ್ವಿಬಣ್ಣ ಕಪ್ಪೆ (Clinotarsus curtipes)
 • ಚಿನ್ನದ ಬೆನ್ನಿನ ಕಪ್ಪೆ (Hylarana aurantiaca)
 • ನೀಲಿ ಕಣ್ಣ ಕಪ್ಪೆ (Blue Eyed Frog)
 • ಹಳದಿ ಪೊದೆ ಕಪ್ಪೆ
 • ಕಲ್ಪೆಟ್ಟ ಹಳದಿ ಪೊದೆ ಕಪ್ಪೆ (Raorchestes nerostagona)

ಇನ್ನು ಕಪ್ಪೆಗಳ ಆಹಾರದ ವಿಷಯಕ್ಕೆ ಬಂದರೆ, ಬೇಕಾದಷ್ಟು ಬಗೆಯ ಕ್ರಿಮಿ ಕೀಟಗಳನ್ನು ನಾವು ಕಾಣಬಹುದು. ಅಟ್ಲಾಸ್ ಪತಂಗ (Atlas Moth), ಸೈಕ್ಲೋಟೊಮಾ ಅಲ್ಲೇನಿ (Cyclotoma Alleni) ಎಂಬ ಜೀರುಂಡೆ, ಸೇಲೆನೋಪ್ಸ್ ಆಗುಮ್ಬೇನ್ಸಿಸ್ (Selenops Agumbensis) ಎಂಬ ಜೇಡ , ಉದ್ದ ಕೊಂಬಿನ ಜೀರುಂಡೆ (longhorn beetles -Cerambycidae) ಇವುಗಳನ್ನು ನೋಡಬಹುದಾಗಿದೆ.

ಕೆ.ಎಸ್.ನಿಸ್ಸಾರ್ ಅಹ್ಮದ್ ಅವರು ವರ್ಣಿಸಿದಂತೆ

“ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ”

ಆಗುಂಬೆಯ ನಿತ್ಯ ಹರಿದ್ವರ್ಣ ಕಾಡುಗಳು ನಿಜವಾಗಿಯೂ ಮಾನವನ ಕಣ್ಣಿಗೆ ನಿತ್ಯೋತ್ಸವವೇ ಸರಿ.

 

 

ನಿಮ್ಮ ಕಾಮೆಂಟ್

Please enter your comment!
Please enter your name here